ಬೆಂಗಳೂರು: "ಹಿಂದಿನ ಹೆಜ್ಜೆಯನ್ನು ಮರೆತವನು ಮುಂದಿನ ಹೆಜ್ಜೆ ಇಡಲಾರ ಎಂಬ ಮಾತನ್ನು ನಾನು ಬಲವಾಗಿ ನಂಬಿದವನು. ಈ ಮುಖ್ಯಮಂತ್ರಿ ಕುರ್ಚಿ ನನ್ನದಲ್ಲ, ಇದು ಏಳು ಕೋಟಿ ನಾಡಿನ ಜನತೆ ಹಾಗೂ ಹೈಕಮಾಂಡ್ ಕೊಟ್ಟಿರುವ ದೊಡ್ಡ ಜವಾಬ್ದಾರಿ," ಎಂದು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಹೇಳಿದರು. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಸಿದ ತಮ್ಮ ಚೊಚ್ಚಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಒಂದು ವರ್ಷದ ರಾಜಕೀಯ ಹಗ್ಗಜಗ್ಗಾಟ
ಕಳೆದ ಒಂದು ವರ್ಷದಿಂದ ರಾಜ್ಯ ರಾಜಕೀಯದಲ್ಲಿ ಆಡಳಿತ ಹಸ್ತಾಂತರದ ಕುರಿತು ನಡೆದ ಚರ್ಚೆಗಳನ್ನು ಸ್ಮರಿಸಿದ ಸಿಎಂ, "ಯಾವಾಗ ಅಧಿಕಾರ ಹಸ್ತಾಂತರದ ಪ್ರಶ್ನೆ ಬಂದಿತೋ, ಆಗ ಮಲಗಿದ್ದವರನ್ನು ಎಬ್ಬಿಸಲಾಯಿತು, ಎದ್ದವರನ್ನು ಮಲಗಿಸಲಾಯಿತು. ನಾನು ಮೊದಲೇ ಹೇಳಿದಂತೆ ಸಂಜೆಯ ವೇಳೆಗೆ ಆ ಶುಭ ಮುಹೂರ್ತದ ಘಳಿಗೆ ಬಂದಿದ್ದು, ಅದಕ್ಕೆ ರಾಜ್ಯದ ಜನರೇ ಸಾಕ್ಷಿಯಾಗಿದ್ದಾರೆ. ಸಿದ್ದರಾಮಯ್ಯ ಅವರು ತಮಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನಮ್ಮಿಬ್ಬರನ್ನೂ ಕರೆಸಿ ಜವಾಬ್ದಾರಿಯನ್ನು ಹಂಚಿದ್ದಾರೆ. ಕೊಂಚ ತಡವಾದರೂ ದೊಡ್ಡ ನಂಬಿಕೆಯ ಮೇಲೆ ಈ ಅವಕಾಶ ನೀಡಿದ್ದಾರೆ," ಎಂದರು.
ಜೈಲು ವಾಸ, ಆತ್ಮವಿಶ್ವಾಸ ಮತ್ತು ನವಯುಗದ ಆರಂಭ
ತಮ್ಮ ರಾಜಕೀಯ ಏಳುಬೀಳುಗಳ ಬಗ್ಗೆ ಮಾತನಾಡಿದ ಅವರು, "ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಕಷ್ಟ-ಸುಖಗಳೆರಡನ್ನೂ ನೋಡಿದ್ದೇನೆ. ರಾಜಕೀಯ ತಂತ್ರದ ಬಲೆಗೆ ಬಿದ್ದು ತಿಹಾರ್ ಜೈಲಿಗೂ ಹೋಗಿ ಬರಬೇಕಾಯಿತು. ಆದರೆ ನನ್ನಲ್ಲಿದ್ದ ಆತ್ಮವಿಶ್ವಾಸ ಕುಗ್ಗಲಿಲ್ಲ. ಇವತ್ತು ಮತ್ತೆ ಜನರ ಸೇವೆ ಮಾಡಲು, ಸಾಧನೆಯ ಸಾಕ್ಷಿಗುಡ್ಡೆ ಬಿಟ್ಟು ಹೋಗಲು ನನಗೆ ಹೊಸ ಅವಕಾಶ ಸಿಕ್ಕಿದೆ. ಮೊದಲ ಸಂಪುಟ ಸಭೆಯಲ್ಲೇ ಜನರಿಗೆ ಹತ್ತಿರವಾಗುವ 'ನವಯುಗ'ವನ್ನು ನಾವು ಪ್ರಾರಂಭಿಸಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಕಳೆದ ಆರು ತಿಂಗಳಿನಿಂದಲೇ ಸಿದ್ಧತೆ ನಡೆಸಿದ್ದೆ," ಎಂದು ವಿವರಿಸಿದರು.
ಕುವೆಂಪು ಕನಸಿನ ಸರ್ವ ಜನಾಂಗದ ಶಾಂತಿಯ ತೋಟ
ಎಸ್.ಎಂ. ಕೃಷ್ಣ ಅವರ ಕಾಲದ ಆಡಳಿತದ ದಿನಗಳನ್ನು ನೆನಪಿಸಿಕೊಂಡ ಸಿಎಂ, "ಅಂದು ಕೃಷ್ಣ ಅವರು ನನ್ನನ್ನು ರತನ್ ಟಾಟಾ ಅವರ ಬಳಿ ಕಳುಹಿಸಿ ವಿಮಾನ ನಿಲ್ದಾಣದ ಜವಾಬ್ದಾರಿ ವಹಿಸಲು ಹೇಳಿದ್ದರು. ಒಬ್ಬಂಟಿಯಾಗಿ ನಡೆಯುವುದು ಮತ್ತು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ (Walk alone, Walk together) ಅವರ ಕಿವಿಮಾತು ಇಂದಿಗೂ ನೆನಪಿದೆ. ಪ್ರಸ್ತುತ ನಮ್ಮ ಸಂಪುಟದಲ್ಲಿರುವ 14 ಜನ ಅನುಭವಿ ಸಚಿವರು ಎಲ್ಲ ವರ್ಗಕ್ಕೆ ಸೇರಿದವರಾಗಿದ್ದಾರೆ. ಇದು ಕುವೆಂಪು ಅವರು ಹೇಳಿದ 'ಸರ್ವ ಜನಾಂಗದ ಶಾಂತಿಯ ತೋಟ'ವನ್ನು ಪ್ರತಿಬಿಂಬಿಸುತ್ತದೆ. ಮುಂಬರುವ ದಿನಗಳಲ್ಲಿ ಸಂಪುಟದಲ್ಲಿ ಸಾಮೂಹಿಕ (Collective) ನಿರ್ಧಾರಗಳನ್ನು ಕೈಗೊಳ್ಳಲಿದ್ದೇವೆ," ಎಂದರು.