ಬೆಂಗಳೂರು : ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಭೇಟಿ ನೀಡಿ ಕ್ಯಾನ್ಸರ್ ಚಿಕಿತ್ಸೆಗೆ ದಾಖಲಾಗಿರುವ ಮಕ್ಕಳ ಆರೋಗ್ಯ ವಿಚಾರಿಸಿ, ಅವರೊಂದಿಗೆ ಆತ್ಮೀಯವಾಗಿ ಮಾತನಾಡಿ ಸಾಂತ್ವನ ಹೇಳಿದರು. ಮುಖ್ಯಮಂತ್ರಿಗಳ ಹಾರೈಕೆ, ಪ್ರೀತಿಯ ಮಾತುಗಳು ಮಕ್ಕಳ ಮೊಗದಲ್ಲಿ ನಗು ಮೂಡಿಸಿದರೆ; ಪೋಷಕರಲ್ಲಿ ಭರವಸೆ ಮೂಡಿಸಿತು.
ಆಸ್ಪತ್ರೆಯ ಕಪೂರ್ ಕಟ್ಟಡದ ಮಕ್ಕಳ ವಾರ್ಡ್ಗೆ ಭೇಟಿ ನೀಡಿದ ಸಿಎಂಗೆ ಧನುಷ್ ಎಂಬ ಬಾಲಕ ಗುಲಾಬಿ ಹೂ ನೀಡಿ ಸ್ವಾಗತಿಸಿದ. ಹಲವು ಮಕ್ಕಳೊಂದಿಗೆ ಮಾತನಾಡಿದ ಸಿಎಂ ಮಕ್ಕಳಿಗೆ ಚಾಕೊಲೇಟ್, ಚಿತ್ರಕಲೆಯ ಪುಸ್ತಕಗಳನ್ನು ವಿತರಿಸಿದರು. ರಾಯಚೂರು, ಮಾಗಡಿ, ಹೊಸೂರು, ಗುಲ್ಬರ್ಗಾ ಸೇರಿದಂತೆ ವಿವಿಧ ಊರುಗಳಿಂದ ಬಂದಿದ್ದ ಮಕ್ಕಳ ಆರೋಗ್ಯ ವಿಚಾರಿಸಿ, ಚಿಕಿತ್ಸೆ ಹಾಗೂ ಆರೈಕೆ ಬಗ್ಗೆ ಪೋಷಕರೊಂದಿಗೆ ಮಾತನಾಡಿದರು. ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಗುವೊಂದರ ತಾಯಿಯ ಎಪಿಎಲ್ ಪಡಿತರ ಚೀಟಿಯನ್ನು ಬಿಪಿಎಲ್ಗೆ ಬದಲಾಯಿಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು. ಫಲಾನುಭವಿಗಳಿಗೆ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಸೌಲಭ್ಯ ದೊರೆಯುತ್ತಿದೆಯೇ ಎಂಬುದನ್ನೂ ಸಿಎಂ ವಿಚಾರಿಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ನಿರ್ದೇಶನಾಲಯದ ನಿರ್ದೇಶಕ ಡಾ.ನಾಗೇಶ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಕಾತ್ಯಾಯನಿ ದೇವಿ, ಹಣಕಾಸು ಅಧಿಕಾರಿ ಸೌಮ್ಯಾರಾಣಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಇದ್ದರು.
200 ಹೆಚ್ಚುವರಿ ಹಾಸಿಗೆಗಳ ಭರವಸೆ
ಆಟವಾಡುತ್ತಾ ಬಾಲ್ಯ ಕಳೆಯಬೇಕಾದ ಪುಟ್ಟ ಮಕ್ಕಳು ಕ್ಯಾನ್ಸರ್ನಂತಹ ಮಾರಕ ಕಾಯಿಲೆಯೊಂದಿಗೆ ಹೋರಾಡುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಮಕ್ಕಳ ನೋವಿನ ಜತೆಗೆ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಕೊಡಿಸುವ ತಂದೆ-ತಾಯಂದಿರ ಸಂಕಟವೂ ದೊಡ್ಡದು. ಇಂತಹ ಕುಟುಂಬಗಳಿಗೆ ಚಿಕಿತ್ಸೆ ಜತೆಗೆ ಆಸರೆ ಮತ್ತು ಧೈರ್ಯ ನೀಡುವುದು ಸರ್ಕಾರದ ಜವಾಬ್ದಾರಿ. ಕಿದ್ವಾಯಿ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಮಕ್ಕಳೊಂದಿಗೆ ಬರುವ ತಾಯಂದಿರು ಹಾಗೂ ಕುಟುಂಬದ ಸದಸ್ಯರಿಗೆ ವಸತಿ ಕಲ್ಪಿಸಲು 3 ಎಕರೆ ಜಾಗ ನೀಡುವಂತೆ ಮನವಿ ಬಂದಿದ್ದು, ಅದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದ ಬೇರೆಡೆಯಿಂದ ಎಲ್ಲರೂ ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ತುಮಕೂರು, ಮೈಸೂರು, ಬಳ್ಳಾರಿ, ಕಲಬುರಗಿ ಮತ್ತು ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಸಿಎಂ ಹೇಳಿದರು.
ರೋಬಾಟಿಕ್ ಯಂತ್ರ ಖರೀದಿಗೆ ಸಂಪುಟ ಅಸ್ತು
ಆಸ್ಪತ್ರೆಯ ವೈದ್ಯಕೀಯ ಸೌಲಭ್ಯಗಳ ಉನ್ನತೀಕರಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ಈಗಾಗಲೇ ಒಂದು ರೋಬಾಟಿಕ್ ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ರೋಬೋಟಿಕ್ ಯಂತ್ರ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ. ಆಸ್ಪತ್ರೆಯ ಅಭಿವೃದ್ಧಿಗೆ ಜಿಂದಾಲ್, ಇನ್ಫೋಸಿಸ್ ಸೇರಿದಂತೆ ಹಲವು ಸಂಸ್ಥೆಗಳು ಹಾಗೂ ದಾನಿಗಳು ನೀಡಿರುವ ಕೊಡುಗೆ ಶ್ಲಾಘನೀಯ. ವಿವಿಧ ಕಟ್ಟಡಗಳು ಮತ್ತು ಚಿಕಿತ್ಸಾ ಘಟಕಗಳ ನಿರ್ಮಾಣಕ್ಕೆ ಅವರು ನೆರವಾಗಿದ್ದನ್ನು ಸಿಎಂ ನೆನಪಿಸಿಕೊಂಡರು.
ಚಿಕ್ಕ ಮಕ್ಕಳಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಿಗರೇಟ್, ತಂಬಾಕು ಹಾಗೂ ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸಲು ಪೊಲೀಸರು ಹೆಚ್ಚಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ಸಿಎಂ ಇದೇ ವೇಳೆ ಹೇಳಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಸ್ಥೆಗೆ ಭೇಟಿ ನೀಡಿ ಮಕ್ಕಳ ಮೊಗದಲ್ಲಿ ನಗು ತರಿಸಿದ್ದಾರೆ. ಆಸ್ಪತ್ರೆಯ ಅಭಿವೃದ್ಧಿಗೆ ರಾಜ್ಯ ಸರಕಾರ ಎಲ್ಲಾ ಸೌಲಭ್ಯಗಳನ್ನ ನೀಡುತ್ತಿದೆ.ಡಾ.ಆರ್.ಕೃಷ್ಣಪ್ಪ, ನಿರ್ದೇಶಕರು, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ