ರಾಜ್ಯ

ಸಿಎಂ ಬದಲಾವಣೆ ಡೇಟ್​ ಫಿಕ್ಸ್​ ಆಗಿಲ್ಲ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
  • ಸಿಲಿಂಡರ್​ ಬೆಲೆ ಏರಿಕೆಗೆ ಕಾಂಗ್ರೆಸ್​ ಆಕ್ರೋಶ
ಕಲಬುರಗಿ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ದಿನಾಂಕ ನಿಗದಿಯಾಗಿಲ್ಲ ಎಂದು ಎಐಸಿಸಿ ಅಧ್ಯಕ್ಷರಾದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸಮಯ ಫಿಕ್ಸ್​ ಆಗದೆ ನಾನ್ಹೇಗೆ ಹೇಳಲಿ ಎಂದು ನಗರದಲ್ಲಿ ಶುಕ್ರವಾರ ಪತ್ರಕರ್ತರನ್ನು ಪ್ರಶ್ನಿಸಿದ ಅವರು, ಈ ವಿಷಯದಲ್ಲಿ ತಪ್ಪು ಮಾಹಿತಿ ಹೋಗುವುದು ಬೇಡ. ಹೈಕಮಾಂಡ್​ ಅಂದ್ರೆ ನಾವೆಲ್ಲರೂ ಸೇರಿ ವಿಚಾರ ಮಾಡುತ್ತೇವೆ ಎಂದರ್ಥ. ಸಿಎಂ ಬದಲಾವಣೆ ಆಗುತ್ತದೆಯೋ, ಆಗುವುದಿಲ್ಲವೋ ಎಂಬುದನ್ನು ಹೇಗೆ ಹೇಳಲಿ? ಸಮಯ ನಿಗದಿಯಾದ ಬಳಿಕ ಏನು ನಿರ್ಧಾರ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ. ಅಲ್ಲಿವರೆಗೆ ಸುಮ್ಮನೆ ತಪ್ಪು ಸಂದೇಶ ಕೊಡಬೇಡಿ ಎಂದರು.
ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಸೇರಿ ಎಲ್ಲರೂ ಸೇರಿ ಏನು ನಿರ್ಣಯ ತೆಗೆದುಕೊಂಡರೆ ಪದ ಮೇಲೇನು ಪರಿಣಾಮ ಆಗಲಿದೆ ಎಂಬುದನ್ನು ಚರ್ಚಿಸಿ ರಾಜ್ಯದ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳುತ್ತೇವೆ. ಅದಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಕೋರಿದರು.
ಬೆಲೆ ಏರಿಕೆ ಮೋದಿ ವಿರುದ್ಧ ವಾಗ್ದಾಳಿ
ವಾಣಿಜ್ಯ ಬಳಕೆ ಅಡುಗೆ ಅನಿಲ ಸಿಲಿಂಡರ್​ ದರವನ್ನು ಒಂದೇ ದಿನ 993 ರೂ. ಹೆಚ್ಚಿಸಿರುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಲವಾಗಿ ವಿರೋಧಿಸಿದರು. ಇದೊಂದು ಜನವಿರೋಧಿ ನಿರ್ಧಾರ. ಕೂಡಲೇ ಬೆಲೆ ಏರಿಕೆ ಕೈಬಿಡಬೇಕು ಎಂದು ಆಗ್ರಹಿಸಿದರು. ಯುದ್ಧದ ಪರಿಣಾಮದಿಂದ ಏರಿಕೆ ಮಾಡಿದೆ. ಆದರೆ ದೇಶದಲ್ಲಿ ಬೆಲೆ ಏರಿಕೆ ಮಾಡುವುದಿಲ್ಲ, ಜನರ ಮೇಲೆ ಹೊರೆ ಹಾಕುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹಲವಾರು ಸಲ ಹೇಳಿದ್ದರಲ್ಲ, ಈಗೇನಾಯ್ತು ಎಂದು ಖಾರವಾಗಿ ಪ್ರಶ್ನಿಸಿದರು. ರೇಟ್​ ಹೆಚ್ಚಳ ಮಾಡಲ್ಲ ಅಂದವರು ಈಗ ಪ್ರತಿಯೊಂದು ವಸ್ತುವಿನ ಬೆಲೆ ಏರಿಸುತ್ತಿದ್ದಾರೆ. ಇದರಿಂದಾಗಿ ದೇಶದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ತೊಂದರೆ ಅನುಭವಿಸುವಂತೆ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನೆಹರು ಮಾದರಿ ವಿದೇಶಿ ನೀತಿ ಪಾಲಿಸಿ
ಬುದ್ದನ ತತ್ವ ಮತ್ತು ಅಷ್ಟಾಂಗ ಮಾರ್ಗಗಳು ವಿಶ್ವದ ಜನರಿಗೆ ಪ್ರೇರಣೆಯಾಗಿವೆ. ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಬೇಕು. ಎರಡು ದೇಶದ ಕಲಹ ನೂರಾರು ದೇಶಗಳಿಗೆ ಸಮಸ್ಯೆ ತಂದೊಡ್ಡಿದೆ ಎಂದು ರ್ಖಗೆ ಹೇಳಿದರು. ಹಿಂದೆ ಪ್ರಧಾನಿಯಾಗಿದ್ದ ಪಂಡಿತ ಜವಾಹರಲಾಲ್​ ನೆಹರು ತರಹ ವಿದೇಶ ನೀತಿ ಪಾಲನೆ ಮಾಡಿದರೆ ನಾವು ಉಳಿಯುತ್ತೇವೆ. ಯುದ್ಧದ ಸನ್ನಿವೇಶದಲ್ಲಿ ನಾವು ಯಾವ ದೇಶದ ಪರ ನಿಲ್ಲಬಾರದು ಎಂಬುದನ್ನು ಪ್ರಧಾನಿ ಅರ್ಥ ಮಾಡಿಕೊಂಡು ಹೆಜ್ಜೆ ಇಡಬೇಕು. ಒಂದು ದೇಶ, ವ್ಯಕ್ತಿ ಪರ ನಿಲ್ಲಬಾರದು ಎಂದು ಸಲಹೆ ನೀಡಿದರು.
ಕಾರ್ಮಿಕ ಕಾಯ್ದೆ ತಿರುಚಿದ ಬಿಜೆಪಿ
ದುಡಿಯವ ವರ್ಗಕ್ಕೆ ಅನುವು ಮಾಡಿಕೊಡಲು ಡಾ.ಬಿ.ಆರ್​. ಅಂಬೇಡ್ಕರ್​ ತಂದಿದ್ದ ಕಾರ್ಮಿಕ ಕಾಯ್ದೆಯನ್ನು ಬಿಜೆಪಿ ಸರ್ಕಾರ ಮನಬಂದತೆ ತಿರುಚಿದೆ. ಕಾರ್ಮಿಕರ ಅನೇಕ ಕಾನೂನುಗಳನ್ನು ನಾಶಪಡಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕ ದಿನಾಚರಣೆ ಹೊತ್ತಿನಲ್ಲಿ ಅವರಿಗೆ ರಣೆ ಇಲ್ಲದಂತಾಗಿದೆ. ಕಾಪೋರ್ರೇಟ್​ ಕಂಪನಿಗಳು ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿರುವುದರಿಂದ ನೌಕರಿಗಳು ಉಳಿಯುತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಕಾರ್ಮಿಕರ ಹಿತರಕ್ಷಣೆಗೆ ನಿಲ್ಲಬೇಕು. ಅದಕ್ಕೆ ಪೂರಕವಾಗಿರುವ ಹಿಂದಿನ ಕಾಯ್ದೆ ಮರುಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಮನರೇಗಾ ಯೋಜನೆಯನ್ನು ಬಡ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಯುಪಿಎ ಸರ್ಕಾರ ಜಾರಿಗೆ ತಂದಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ತಿರುಚಿ ಜನರಿಗೆ ಸಮಸ್ಯೆ ಮಾಡಿದೆ. ಹೀಗಾಗಿ ದೆಹಲಿ ಮತ್ತು ಹರಿಯಾಣದಲ್ಲಿ ಗಲಾಟೆಗಳಾಗಿವೆ ಎಂದರು.