ಸಚಿವ ಎನ್. ಚಲುವರಾಯಸ್ವಾಮಿ 
ರಾಜ್ಯ

ಎರಡು ದಿನಗಳಲ್ಲಿ ಮೋಡ ಬಿತ್ತನೆಗೆ ಚಾಲನೆ - 27 ಕೋಟಿಯಲ್ಲಿ 60 ದಿನ ಕಾರ್ಯಾಚರಣೆ: ಸಚಿವ ಚಲುವರಾಯಸ್ವಾಮಿ ಘೋಷಣೆ

ಪ್ರಮುಖ ಮುಖ್ಯಾಂಶಗಳು

  • "ಮಳೆ ಕೊರತೆ ನೀಗಿಸಲು ಮೋಡ ಬಿತ್ತನೆ: ಇಂದೇ 3 ಸಮಿತಿಗಳ ರಚನೆ"
ಕಲಬುರಗಿ:  ರಾಜ್ಯದಲ್ಲಿ ಎದುರಾಗಿರುವ ಮಳೆ ಕೊರತೆ ನೀಗಿಸುವ ನಿಟ್ಟಿನಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ವೇಗ ನೀಡಲಾಗಿದ್ದು, ಒಟ್ಟು ಮೂರು ಸಮಿತಿಗಳನ್ನು ಇಂದು ಸಂಜೆಯೊಳಗೆ ರಚಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಹೇಳಿದರು.
"ಈ ಸಂಬಂಧ ಈಗಾಗಲೇ ಎರಡು ಸಭೆಗಳನ್ನು ನಡೆಸಿದ್ದು, ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ" ಎಂದು ವಿಜಯವಾಣಿಗೆ  ತಿಳಿಸಿದರು.

ಮೂರು ಸಮಿತಿಗಳ ರಚನೆ

 ಮಾನಿಟರಿಂಗ್ ಕಮಿಟಿ (ಮೇಲ್ವಿಚಾರಣಾ ಸಮಿತಿ): ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಉಸ್ತುವಾರಿ
ಟೆಕ್ನಿಕಲ್ ಕಮಿಟಿ (ತಾಂತ್ರಿಕ ಸಮಿತಿ): ಐಐಟಿ, ಐಐಎಸ್‌ಸಿ ಹಾಗೂ ಹವಾಮಾನ ಇಲಾಖೆಯ ತಜ್ಞರನ್ನು ಒಳಗೊಂಡಿರಲಿದೆ
ಫೀಲ್ಡ್ ಆಪರೇಷನ್ ಮತ್ತು ಇವ್ಯಾಲ್ಯೂಯೇಷನ್ ಕಮಿಟಿ (ಕಾರ್ಯಾಚರಣೆ ಮತ್ತು ಮೌಲ್ಯಮಾಪನ ಸಮಿತಿ)
ಇಂದು ಸಂಜೆಯೊಳಗೆ ಸಮಿತಿ ರಚನೆಯಾಗಿ, ಇನ್ನೆರಡು ದಿನಗಳಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದು ಸಚಿವರು ವಿವರಿಸಿದರು.

"30% ಯಶಸ್ಸು ಸಿಕ್ಕರೆ ಯೋಜನೆ ಸಾರ್ಥಕ"

"ಇದುವರೆಗೆ ರಾಜ್ಯದಲ್ಲಿ ಮೂರು ಬಾರಿ ಮೋಡ ಬಿತ್ತನೆ ನಡೆಸಲಾಗಿದೆ. ಇದರಲ್ಲಿ ಶೇ. 18 ರಿಂದ 20 ರಷ್ಟು ಯಶಸ್ಸು ಸಿಕ್ಕಿದೆ. ನಮಗೆ ಶೇ. 30 ರಷ್ಟು ಯಶಸ್ಸಿನ ದರ ದೊರೆತರೆ ಇಡೀ ಯೋಜನೆ ಸಾರ್ಥಕವಾಗಲಿದೆ. ರಾಜ್ಯದಲ್ಲಿ ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿದೆ. ಮಳೆಯಾದರೂ ನಿರಂತರವಾಗಿ ಸುರಿಯುವುದಿಲ್ಲ ಎಂಬ ವರದಿಗಳಿವೆ. ಹೀಗಾಗಿ ಮೋಡ ಬಿತ್ತನೆ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಮಳೆ ತರಿಸಬೇಕೆಂಬ ಜನರ ನಿರೀಕ್ಷೆಯನ್ನು ಈಡೇರಿಸುವುದು ಸರ್ಕಾರದ ಕರ್ತವ್ಯ. ಮುಂದಿನ ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ" ಎಂದರು.

ಕಾರ್ಯಾಚರಣೆ ಹೇಗೆ?

"ನಾಲ್ಕು ಕಂದಾಯ ವಿಭಾಗಗಳಲ್ಲಿ ಜಲಸಂಪನ್ಮೂಲ ಇಲಾಖೆಯ ಮೂಲಕವೇ ಮೋಡ ಬಿತ್ತನೆ ಕೈಗೊಳ್ಳಲಾಗುವುದು. ಮೋಡ ಬಿತ್ತನೆ ಮಾಡಿದ 15 ಕಿ.ಮೀ. ವ್ಯಾಪ್ತಿಯಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಎಲ್ಲಿ ಸೂಕ್ತ ಮೋಡಗಳಿರುತ್ತವೆಯೋ ಅಲ್ಲಿ ಮಾತ್ರ ಬಿತ್ತನೆ ಸಾಧ್ಯ. ಹೀಗಾಗಿ ರಾಜ್ಯಾದ್ಯಂತ ಮೋಡಗಳ ಲಭ್ಯತೆಯ ಆಧಾರದ ಮೇಲೆ ಪ್ರಕ್ರಿಯೆ ನಡೆಯಲಿದೆ" ಎಂದು ಹೇಳಿದರು.

27 ಕೋಟಿ, 200 ಗಂಟೆ ಹಾರಾಟ

ಅಂದಾಜು 27 ಕೋಟಿ ರೂ. ವೆಚ್ಚದಲ್ಲಿ 60 ದಿನಗಳ ಕಾಲ (ಸುಮಾರು 200 ಗಂಟೆ) ಮೋಡ ಬಿತ್ತನೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಾಚರಣೆ ಇರಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ದಟ್ಟ ಮೋಡಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಅಕ್ಟೋಬರ್‌ನಲ್ಲಿ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಪ್ರಸ್ತುತ ಸಮಯ ಮೋಡ ಬಿತ್ತನೆಗೆ ಅತ್ಯಂತ ಸೂಕ್ತವಾಗಿದೆ ಎಂದು ತಿಳಿಸಿದರು.

"ಆರ್ಥಿಕ ಹೊರೆಯಾದರೂ ಚಿಂತೆಯಿಲ್ಲ"

"ಸರ್ಕಾರಕ್ಕೆ ಆರ್ಥಿಕ ಹೊರೆಯಾದರೂ ಚಿಂತೆಯಿಲ್ಲ. ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಬೇಸಿಗೆಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ಕೆರೆ-ಕುಂಟೆಗಳನ್ನು ತುಂಬಿಸಿ ಖುಷ್ಕಿ ಭೂಮಿಯ ಕೃಷಿಗೂ ನೆರವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದರು.