ಅಕ್ರಮ ಮಾದಕ ವಸ್ತು ಸಾಗಣೆ ಕುರಿತು ತಪಾಸಣೆ
- ಅಕ್ರಮ ಮಾದಕ ವಸ್ತು ಸಾಗಣೆ ಕುರಿತು ತಪಾಸಣೆ
- ಪೂರ್ವ ವಿಭಾಗದ ಪೊಲೀಸರಿಂದ ವಿಶೇಷ ಕಾರ್ಯಾಚರಣೆ
ಬೆಂಗಳೂರು: ರಾಜಧಾನಿ ಬೆಂಗಳೂರು ನಗರಕ್ಕೆ ಹೊರ ರಾಜ್ಯಗಳಿಂದ ಪೂರೈಕೆಯಾಗುತ್ತಿರುವ ಕೋಟ್ಯಂತರ ರೂ.ಮೌಲ್ಯದ ಮಾದಕ ವಸ್ತುಗಳ ಪತ್ತೆಗೆ ನಗರ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ. ರೈಲ್ವೆ ನಿಲ್ದಾಣ ಹಾಗೂ ಆನ್‌ಲೈನ್ ಕೋರಿಯರ್ ಕೇಂದ್ರಗಳಲ್ಲಿ ಶ್ವಾನದಳದೊಂದಿಗೆ ತಪಾಸಣೆ ನಡೆಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಮಾದಕ ವಸ್ತು ದಂಧೆ ನಿಯಂತ್ರಣ ಉದ್ದೇಶದಿಂದ ಪೂರ್ವ, ಈಶಾನ್ಯ ವಿಭಾಗದ ಪೊಲೀಸರು ಬಾಣಸವಾಡಿ, ಕೆ.ಆರ್.ಪುರಂ , ಯಲಹಂಕ ರೈಲ್ವೆ ನಿಲ್ದಾಣದಲಿ 100ಕ್ಕೂ ಹೆಚ್ಚು ಮಂದಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು, ಕಾರ್ಮಿಕರು, ವ್ಯಾಪಾರಿಗಳು ಹಾಗೂ ಗೂಡ್ಸ್ ಸಾಮಗ್ರಿಗಳ ತಪಾಸಣೆ ನಡೆಸಿದರು. ಕಾರ್ಯಾಚರಣೆಯಲ್ಲಿ ಬಾಣಸವಾಡಿ, ಯಲಹಂಕ, ಆರ್.ಎಂ.ನಗರ ಪೊಲೀಸರು ಶ್ವಾನದಳದೊಂದಿಗೆ ರೈಲ್ವೆ ನಿಲ್ದಾಣದ ವಿವಿಧ ಫ್ಲಾಟ್‌ಫಾರ್ಮ್, ಶಂಕಾಸ್ಪದ ಸ್ಥಳಗಳ ಪರಿಶೀಲಿಸಿದರು.
59 ಪೋರ್ಟರ್ ಸಂಸ್ಥೆಗಳ ತಪಾಸಣೆ:
ನಿಯಮ ಬಾಹಿರ ವಸ್ತುಗಳ ಪೂರೈಕೆ ಮತ್ತು ಸಾಗಾಣಿಕೆ ತಡೆಗೆ 59 ಪೋರ್ಟರ್ ಸೇವಾ ಸಂಸ್ಥೆಗಳು ಹಾಗೂ ಆನ್‌ಲೈನ್ ಡೆಲಿವರಿ ಸಂಸ್ಥೆ, ಗೋದಾಮುಗಳ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು ತಪಾಸಣೆ ನಡೆಸಿದರು. ನಿನ್ನೆ ತಡರಾತ್ರಿವರೆಗೆ ನಗರದ ವಿವಿಧ ಕಡೆ ಪರಿಶೀಲನೆ ನಡೆಸಿದರು. ನಿಷೇಧಿತ ಮಾದಕ ವಸ್ತು ಮಾರಾಟಗಾರರು ಇತ್ತೀಚೆಗೆ ಪಾರ್ಸೆಲ್ ಹಾಗೂ ಡೆಲಿವರಿ ಸೇವೆಗಳ ಮೂಲಕ ಅಕ್ರಮ ದಂಧೆಯಲ್ಲಿ ತೋಡಗಿದ್ದಾರೆ. ತಂಬಾಕು ಉತ್ಪನ್ನ, ಅಕ್ರಮ ಮದ್ಯ, ಶಸ್ತಾಸ, ಸ್ಫೋಟಕ ವಸ್ತುಗಳು, ನಕಲಿ ಕರೆನ್ಸಿ ಪೂರೈಕೆ ಮಾಡಲಾಗುತ್ತಿದೆ.
ವಿದೇಶದಿಂದ ಕೋರಿಯರ್ ಹೆಸರಿನಲ್ಲಿ ಅನಾಮದೇಯ ವ್ಯಕ್ತಿಗಳ ಹೆಸರಿನಲ್ಲಿ ಹಾಗೂ ಬಾಡಿಗೆ ಮನೆ ಮಾಲೀಕರ ಹೆಸರಿನಲ್ಲಿ ಡ್ರಗ್ಸ್ ಕಳುಹಿಸಲಾಗುತ್ತಿದೆ. ಈ ಕುರಿತು ನಗರ ಪೊಲೀಸರು ವಿಭಾಗವಾರು ಡ್ರಗ್ಸ್ ದಂಧೆಕೋರರ ಮೇಲೆ ಹದ್ದಿನ ಕಣ್ಣು ಇರಿಸಿದ್ದಾರೆ.