ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾಲೋಚನಾ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು. ಬಿ.ಮಹೇಶ್, ಕೆ.ಕೆ.ರಘುಪತಿ, ಬಿ.ಪಿ.ಗಂಗಾಧರ ಸ್ವಾಮಿ, ಕೃಷ್ಣರಾಜ,ಸೌಮ್ಯಾರಾಖಿ ಇತರರಿದ್ದರು. 
ರಾಜ್ಯ

ನೀರು ಉಳಿಸಲು ಹವಾಮಾನ ಸ್ನೇಹಿ ಕೃಷಿ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಡಳಿತ ಅಧಿಕಾರಿ ಬಿ.ಮಹೇಶ್
  • ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ
ಎಚ್.ಡಿ.ಕೋಟೆ: ಭತ್ತದ ಬೆಳೆಯಲ್ಲಿ ಹವಾಮಾನ ಸ್ನೇಹಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಮಿಥೇನ್ ಅನಿಲದ ಹೊರಸೂಸುವಿಕೆಯನ್ನು ಗಣನೀಯವಾಗಿ ತಗ್ಗಿಸುವ ಜತೆಗೆ ನೀರಿನ ಉಳಿತಾಯಕ್ಕೂ ಉತ್ತೇಜನ ನೀಡಬಹುದು ಎಂದು ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಡಳಿತ ಅಧಿಕಾರಿ ಬಿ.ಮಹೇಶ್ ಸಲಹೆ ನೀಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ನ್ಯೂರೆಜೆನ್ ಸಂಸ್ಥೆ ವತಿಯಿಂದ ಹವಮಾನ- ಸ್ನೇಹಿ ಹಾಗೂ ಸುಸ್ಥಿರ ಭತ್ತದ ಕೃಷಿಯಲ್ಲಿ ಸ್ಥಳೀಯ ಪಾಲುದಾರರ ಸಮಾಲೋಚನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭತ್ತದ ಬೆಳೆಯಲ್ಲಿ ನಿರಂತರವಾಗಿ ನೀರು ನಿಲ್ಲಿಸುವ ಪದ್ಧತಿಯಿಂದ ಮಣ್ಣಿನಲ್ಲಿ ಮಿಥೇನ್ ಅನಿಲ ಉತ್ಪತ್ತಿಯಾಗಿ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಈ ಅನಿಲವು ಜಾಗತಿಕ ತಾಪಮಾನ ಹೆಚ್ಚಳಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಅದನ್ನು ತಗ್ಗಿಸಲು ಹವಾಮಾನ ಸ್ನೇಹಿ ಕೃಷಿ ವಿಧಾನಗಳು ಪರಿಣಾಮಕಾರಿಯಾಗಲಿವೆ ಎಂದು ಹೇಳಿದರು.
ಅಗ್ರಿಕ್ಯಾಪ್ಟರ್ (ಅಜ್ಟಜಿಇಠ್ಠ್ಟಿಛಿ) ಸಹಯೋಗದಲ್ಲಿ ನ್ಯೂರೆಜೆನ್ ಸಂಸ್ಥೆಯು ’ಅಗ್ರಿಕ್ಯಾಪ್ಟರ್ ದಕ್ಷಿಣ ಏಷ್ಯಾ ಅಕ್ಕಿ ಮೀಥೇನ್ ಯೋಜನೆಯನ್ನು ಕಾರ್ಬನ್ ಕಾರ್ಯಕ್ರಮ (್ಖಛ್ಟ್ಟಿ) ಚೌಕಟ್ಟಿನಡಿ ಜಾರಿಗೊಳಿಸುತ್ತಿದೆ. ಈ ಯೋಜನೆಯು ಭತ್ತದ ಕೃಷಿಯಲ್ಲಿ ಹವಾಮಾನ ಸ್ನೇಹಿ ಪದ್ಧತಿಗಳನ್ನು ಅಳವಡಿಕೊಳ್ಳಲು ಸಹಾಯ ಮಾಡಲಿದ್ದು, ಇಂಗಾಲ ಹಾಗೂ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯಲ್ಲಿ ಭತ್ತದ ಪಾಲು ಶೇ. 9ರಿಂದ 12ರಷ್ಟಿದೆ. ಆದ್ದರಿಂದ ಭತ್ತದ ಬೆಳೆಯಲ್ಲಿ ’ಪರ್ಯಾಯ ಒದ್ದೆ-ಒಣಗಿಸುವಿಕೆ’ ಪದ್ಧತಿಯನ್ನು ಅನುಸರಿಸುವ ಮೂಲಕ ಮಿಥೇನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದಾಗಿದೆ ಎಂದು ವಿವರಿಸಿದರು.
ನೀರಾವರಿ ಇಲಾಖೆಯ ಸೂಪರಿಟೆಂಡೆಂಟ್ ಇಂಜಿನಿಯರ್ ಕೆ.ಕೆ.ರಘುಪತಿ ಮಾತನಾಡಿ, ಭತ್ತದ ಬೆಳವಣಿಗೆ ಹಂತದಲ್ಲಿ ಎರಡು ಬಾರಿ ಐದು ದಿನಗಳ ಕಾಲ ಹೊಲದಲ್ಲಿ ನೀರನ್ನು ಸಂಪೂರ್ಣವಾಗಿ ನಿಲ್ಲಿಸಿ, ಬಳಿಕ ಮತ್ತೆ ನೀರು ಹರಿಸುವ ವಿಧಾನವನ್ನು ರೈತರು ಅನುಸರಿಸಿದರೆ ಶೇ. 30ರಷ್ಟು ನೀರನ್ನು ಉಳಿತಾಯ ಮಾಡಬಹುದು. ಇದರಿಂದ ಬೆಳೆಗೆ ಯಾವುದೇ ಹಾನಿಯಾಗುವುದಿಲ್ಲ. ಬದಲಿಗೆ ನೀರಿನ ಸಮರ್ಪಕ ಬಳಕೆ, ಮಣ್ಣಿನ ಗುಣಮಟ್ಟ ಸುಧಾರಣೆ ಹಾಗೂ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಒಂದು ಕೆಜಿ ಭತ್ತ ಉತ್ಪಾದಿಸಲು ಸರಾಸರಿ 300 ಲೀಟರ್ ನೀರು ಬೇಕಾಗುತ್ತದೆ. ಆದರೆ ಈ ವಿಧಾನವನ್ನು ಅನುಸರಿಸುವುದರಿಂದ ಒಂದು ಎಕರೆಗೆ ಸುಮಾರು 10 ಲಕ್ಷ ಲೀಟರ್ ನೀರನ್ನು ಉಳಿಸುವ ಸಾಧ್ಯತೆ ಇದೆ. ಯೋಜನೆಯಲ್ಲಿ ಭಾಗವಹಿಸುವ ರೈತರಿಗೆ ಪ್ರೋತ್ಸಾಹಧನವಾಗಿ 30 ಡಾಲರ್ ನೀಡಲಾಗುವುದು ಎಂದರು.
ನ್ಯೂರೆಜೆನ್ ಸಂಸ್ಥೆ ನಿರ್ದೇಶಕ ಬಿ.ಪಿ.ಗಂಗಾಧರ ಸ್ವಾಮಿ ಮಾತನಾಡಿ, ಎಚ್.ಡಿ. ಕೋಟೆ, ಸರಗೂರು, ನಂಜನಗೂಡು, ತಿ. ನರಸೀಪುರ, ಸಾಲಿಗ್ರಾಮ, ಕೆ.ಆರ್.ನಗರ ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಸೇರಿದಂತೆ ವಿವಿಧ ಭಾಗಗಳ ಸುಮಾರು 15 ಸಾವಿರ ಎಕರೆ ಪ್ರದೇಶದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ರೈತರಿಗೆ ತರಬೇತಿ, ಜಾಗೃತಿ ಕಾರ್ಯಕ್ರಮಗಳು ಹಾಗೂ ಪ್ರಾಯೋಗಿಕ ಮಾಹಿತಿ ನೀಡುವ ಮೂಲಕ ಹವಾಮಾನ ಸ್ನೇಹಿ ಕೃಷಿಯನ್ನು ಉತ್ತೇಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಎಸ್‌ಇಸಿ ಪ್ರಾಧ್ಯಾಪಕ ಕೃಷ್ಣರಾಜ, ಏಷ್ಯ ವಲಯ ಅಧಿಕಾರಿ ಸೌಮ್ಯಾರಾಖಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಕೆ.ರವಿ, ಹಿರಿಯ ವಿಜ್ಞಾನಿ ಬಿ.ಎನ್.ಜ್ಞಾನೇಶ್, ನ್ಯೂರೆಜೆನ್ ನಿರ್ದೇಶಕ ಪಲ್ಲವ ಪುರುಷೋತ್ತಮ್, ಪ್ರಗತಿಪರ ರೈತರ ಎಂ.ಎಸ್.ನಾಗರಾಜು, ಸುಮಾ, ನ್ಯೂರೆಜೆನ್ ಯೋಜನಾಧಿಕಾರಿ ಎಂ.ನಾಗರಾಜು ಇದ್ದರು.