ಮಹಿಳಾ ಶೌಚಗೃಹ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಯಡ್ರಾಮಿ ಪಟ್ಟಣ ಪಂಚಾಯಿತಿಗೆ ಬೀಗ ಹಾಕಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಸರೀಪಾ ಚಿಂಚೋಳಿ, ಭಾಗಮ್ಮ ಚೀಲಾ, ಜ್ಯೋತಿ ಮೇಲಿನಮಠ, ದಾವಲ್ಬಿ ಭಾಗವಾನ್, ನಾಗಮ್ಮ ಮಾಳಿ, ಸಿದ್ದಮ್ಮ ಉಪ್ಪಾರ ಇದ್ದರು.
ಯಡ್ರಾಮಿ: ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಮಹಿಳೆಯರ ಸಾರ್ವಜನಿಕ ಶೌಚಗೃಹ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ತೆರವುಗೊಳಿಸುವುದರ ಜತೆಗೆ ಕಾಂಪೌಂಡ್ ನಿರ್ಮಿಸಬೇಕು ಎಂದು ಒತ್ತಾಯಿಸಿ ಮಹಿಳೆಯರು ಪಟ್ಟಣ ಪಂಚಾಯತಿ ಕಚೇರಿಗೆ ಬೀಗ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.
ಮಹಿಳೆಯರ ಅನುಕೂಲಕ್ಕಾಗಿ ಸಾರ್ವಜಿನಕ ಶೌಚಗೃಹ ನಿರ್ಮಿಸುವುದಕ್ಕಾಗಿ ಪೊಲೀಸ್ ಠಾಣೆ ಹಿಂಭಾಗದಲ್ಲಿ 200*300 ಫೀಟ್ ಅಳತೆಯ ಸ್ಥಳ ಮೀಸಲಿಡಲಾಗಿದೆ. ನಿತ್ಯ ವಾರ್ಡ್ 2, 3 ಹಾಗೂ 4ರ ನೂರಾರು ಮಹಿಳೆಯರು ಇದೇ ಸ್ಥಳದಲ್ಲಿ ಬಹಿರ್ದೆಸೆಗೆ ತೆರಳುತ್ತಾರೆ. ಆದರೆ ಕೆಲ ವ್ಯಕ್ತಿಗಳು ಈ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಮಹಿಳೆಯರ ಶೌಚಗೃಹಕ್ಕೆ ಮೀಸಲಿರುವ ಸ್ಥಳಕ್ಕೆ ಕಾಂಪೌಂಡ್ ನಿರ್ಮಾಣ ಮಾಡಬೇಕು ಎಂದು ಹಲವು ಬಾರಿ ಪಟ್ಟಣ ಪಂಚಾಯತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಲ್ಲದೆ ಇದೇ ಸ್ಥಳದಲ್ಲಿ ಜೆಸ್ಕಾಂನಿಂದ ಟಿಸಿ ಅಳವಡಿಸಿದ್ದು, ಅದರ ದುರಸ್ತಿ ಹಾಗೂ ಕೆಲಸಕ್ಕಾಗಿ ಜೆಸ್ಕಾಂ ಸಿಬ್ಬಂದಿ ಬರುತ್ತಾರೆ. ಇದರಿಂದ ಮಹಿಳೆಯರಿಗೆ ಮುಜುಗರ ಉಂಟಾಗುತ್ತಿದೆ. ಹೀಗಾಗಿ ಅಲ್ಲಿರುವ ವಿದ್ಯುತ್ ಪರಿವರ್ತಕವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಅ.1ರಂದು ಪಟ್ಟಣ ಪಂಚಾಯಿತಿಗೆ ಬೀಗ ಹಾಕಿ ಅರ್ನಿದಿಷ್ಟಾವಧಿ ದರಣಿ ನಡೆಸುವುದಾಗಿ ಎಚ್ಚರಿಸಿದರು.
ಪಟ್ಟಣ ಪಂಚಾಯಿತಿ ಪ್ರಥಮ ದರ್ಜೆ ಸಹಾಯಕಿ ಸುಲಭಾ ಕುಲಕರ್ಣಿ ಮನವಿ ಸ್ವೀಕರಿಸಿ ಮಾತನಾಡಿ, ಮುಖ್ಯಾಧಿಕಾರಿಗಳು ಎಸ್ಐಆರ್ ಪ್ರಕ್ರಿಯೆಯಲ್ಲಿ ಇದ್ದು, ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಹೋರಾಟ ಹಿಂಪಡೆಯಲಾಯಿತು.
ಪ್ರಮುಖರಾದ ಬೋರಮ್ಮಗೌಡತಿ ಬಂಡೆಪ್ಪಗೋಳ, ಸರೀಪಾ ಚಿಂಚೋಳಿ, ದಾವಲ್ಬಿ ಭಾಗವಾನ್, ಭಾಗಮ್ಮ ಚೀಲಾ, ಜ್ಯೋತಿ ಮೇಲಿನಮಠ, ನಾಗಮ್ಮ ಮಾಳಿ, ಜೈನಾ ಚೌದ್ರಿ, ಚನ್ನಮ್ಮ ಚೀಲಾ, ಬಸಲಿಂಗಮ್ಮ ಅಯ್ಯಪ್ಪಗೋಳ, ಚನ್ನಮ್ಮ ಮಾಳಿ, ನೀಲಮ್ಮ ಸೋಮಪ್ಪಗೋಳ, ಅನ್ನಮ್ಮ ದಿಡ್ಡಿಮನಿ, ಚಂದಮ್ಮ ಮುಳ್ಳೊಳ್ಳಿ, ಯಲ್ಲಮ್ಮ ದೊಡ್ಡಮನಿ, ಸೈರಾ ಚೌದ್ರಿ, ಸತ್ಯಮ್ಮ ಡೋಣಿ, ಸಿದ್ದಮ್ಮ ಉಪ್ಪಾರ, ಮಾಳಮ್ಮ ಪೂಜಾರಿ, ಮಡೆಮ್ಮ ಗಿಡ್ರಾಳ ಇತರರಿದ್ದರು.