ಕುಂಚಾವರಂ ಗ್ರಾಮದ ಮಾರುಕಟ್ಟೆ ಬದಿಯಲ್ಲಿ ಬಿದ್ದಿರುವ ಕಸದ ರಾಶಿ.
ಚಿಂಚೋಳಿ: ಗಡಿ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾದ ಕುಂಚಾವರಂ ಗ್ರಾಮದ ಮಾರುಕಟ್ಟೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಗ್ರಾಹಕರು ಹಾಗೂ ವ್ಯಾಪಾರಸ್ಥರು ಸಾಂಕ್ರಾಮಿಕ ಕಾಯಿಲೆ ಭೀತಿಯಲ್ಲಿ ವ್ಯಾಪಾರ ನಡೆಸುವ ಸ್ಥಿತಿ ಇದೆ.
ಸುತ್ತಲಿನ ಗ್ರಾಮಗಳಲ್ಲಿಯೇ ದೊಡ್ಡ ಮಾರುಕಟ್ಟೆ ಇದಾಗಿದ್ದು, ನಿತ್ಯ ಸಾವಿರಾರು ಜನರು ಭೇಟಿ ಕೊಡುತ್ತಾರೆ. ಮಾರುಕಟ್ಟೆ ಆವರಣದಲ್ಲಿರುವ ಸಾರ್ವಜನಿಕ ಶೌಚಗೃಹವಿದ್ದು, ನಿರ್ವಹಣೆ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ. ಹೀಗಾಗಿ ಯಾರೊಬ್ಬರೂ ಟಾಯ್ಲೆಟ್ ಹತ್ತಿರವೂ ಸುಳಿಯಲ್ಲ. ತರಕಾರಿ ಹಾಗೂ ಇತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದ್ದು, ಇಡೀ ಮಾರುಕಟ್ಟೆ ಆವರಣ ಕಸದ ತೊಟ್ಟಿಯಂತಾಗಿದೆ. ಮಾರ್ಕೆಟ್ ಶುಚಿ ಮಾಡುವಂತೆ ಸ್ಥಳಿಯ ಆಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಕಷ್ಟ ಕೇಳುವವರೇ ಇಲ್ಲದಂತಾಗಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ಕುಂಚಾವರಂ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿದ್ದು, ಪ್ರತಿ ಭಾನುವಾರ ಸಂತೆ ಜರಗುತ್ತದೆ. ಇಲ್ಲಿಗೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ರೈತರು ಬರುತ್ತಾರೆ. ಸ್ವಚ್ಛತೆ ಮರೀಚಿಕೆಯಾಗಿದ್ದು, ಹಲವು ಕಾಯಿಲೆಗಳ ಭೀತಿಯಲ್ಲಿಯೇ ವ್ಯಾಪಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
— > ಚಿನ್ನಾ ಕುಂಚಾವರಂ, ಸ್ಥಳಿಯ ನಿವಾಸಿ
ಮಾರ್ಕೆಟ್ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಕ್ರಮಕ್ಕೆ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಶೌಚಗೃಹ ಕುರಿತು ಅಧಿಕಾರಿಯೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು.
— > ಸಂತೋಷಕುಮಾರ ಚವ್ಹಾಣ್, ತಾಪಂ ಇಒ