Cleanliness is a rarity in Vatadahosahalli. 
ರಾಜ್ಯ

ವಾಟದಹೊಸಹಳ್ಳಿಯಲ್ಲಿ ಸ್ವಚ್ಛತೆ ಮರೀಚಿಕೆ

ನಗರಗೆರೆ :

ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿಯಲ್ಲಿ ಚರಂಡಿಗಳು ಗಬ್ಬು ನಾರುತ್ತಿದ್ದು, ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕ್ರಮಕ್ಕೆ ಮೀನಮೇಷ

ಪಂಚಾಯಿತಿಗೆ ಒಳಪಡುವ 16 ಗ್ರಾಮದಲ್ಲಿ 1,850 ಮನೆಗಳಿದ್ದು, ಒಟ್ಟು 8,992 ಜನಸಂಖ್ಯೆ ಇದೆ. ಕುಡಿಯುವ ನೀರು, ಆರೋಗ್ಯ, ವಿದ್ಯುತ್​, ಚರಂಡಿ ಹಾಗೂ ರಸ್ತೆ ಸೇರಿ ಹಲವು ಸಮಸ್ಯೆಗಳು ವರ್ಷಗಳಿಂದ ಮುಂದುವರಿದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.ಸರ್ಕಾರಿ ಆಸ್ಪತ್ರೆಯಿದ್ದರೂ ವೈದ್ಯರ ವರ್ಗಾವಣೆ ಹಿನ್ನೆಲೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ತಾಲೂಕು ಆಸ್ಪತ್ರೆಗೆ ತೆರಳುವ ಪರಿಸ್ಥಿತಿಯಿದೆ. ಕೂಡಲೇ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸಿ, ಅಗತ್ಯ ಸಿಬ್ಬಂದಿ ಹಾಗೂ ಸೌಕರ್ಯ ಕಲ್ಪಿಸಬೇಕು.

ಗ್ರಾಮದ ಪ್ರಮುಖ ರಸ್ತೆ ಹಾಗೂ ಮನೆಗಳ ಮುಂಭಾಗದಲ್ಲಿನ ಚರಂಡಿಗಳು ಕಸ, ಪ್ಲಾಸ್ಟಿಕ್​ ತ್ಯಾಜ್ಯದಿಂದ ತುಂಬಿಕೊಂಡು, ಕೊಳೆತು ದುರ್ವಾಸನೆ ಬೀರುತ್ತಿದೆ.

ಹಲವೆಡೆ ನೀರು ಸಿಕ್ಕಿಲ್ಲ

ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 764 ವಿದ್ಯಾರ್ಥಿ&ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, 37 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಜಲ ಜೀವನ ಯೋಜನೆಯಡಿ ರಸ್ತೆಗಳನ್ನೆಲ್ಲ ಅಗೆದು ಪೈಪ್​ಲೈನ್​ ಅಳವಡಿಸಿ, ಮನೆಮನೆಗೂ ಕೊಳವೆ ಸಂಪರ್ಕ ಕಲ್ಪಿಸಿದರೂ ಹಲವೆಡೆ ನೀರು ಸಿಕ್ಕಿಲ್ಲ. ಪಂಚಾಯಿತಿ ಅಧಿಕಾರಿಗಳು ಸಮಸ್ಯೆ ಪರಿಶೀಲಿಸಿ, ಕುಡಿಯುವ ನೀರು ಪೂರೈಸಬೇಕಿದೆ. ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಅಲ್ಪ&ಸ್ವಲ್ಪ ನೀರಿರುವ ಕೊಳವೆಬಾವಿ ಮೂಲಕ ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಮರ್ಪಕ ವಿದ್ಯುತ್​ ಪೂರೈಕೆಯಿಲ್ಲದೆ ಅನ್ನದಾತರು ತೊಂದರೆ ಅನುಭವಿಸುವಂತಾಗಿದೆ. ವಾಟದಹೊಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಬಹುತೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ.

ತ್ಯಾಜ್ಯದಿಂದ ತುಂಬಿರುವ ಚರಂಡಿಗಳಲ್ಲಿ ಮಳೆ ನೀರು ಸೇರಿಕೊಳ್ಳುತ್ತಿರುವುದರಿಂದ ಕೊಳಚೆ ಸಮಸ್ಯೆ ಮತ್ತಷ್ಟು ಉಲ್ಭಣಗೊಂಡಿದೆ. ನೀರು ನಿಂತಿರುವ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದ್ದು, ಮಕ್ಕಳು, ವೃದ್ಧರು ಸೇರಿ ಗ್ರಾಮದ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ದಿನಕಳೆಯುವಂತಾಗಿದೆ.

ಗ್ರಾಮದಲ್ಲಿನ ಚರಂಡಿಗಳು ಸ್ವಚ್ಛತೆವಿಲ್ಲದೇ ಹಾಳಾಗಿದ್ದು, ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಸಮಸ್ಯೆ ಪಂಚಾಯಿತಿಗೆ ತಿಳಿಸಿದರೂ ಸೂಕ್ತ ಪರಿಹಾರ ದೊರೆಯುತ್ತಿಲ್ಲ. ಜನರ ತೊಂದರೆಗೆ ತಕ್ಷಣ ಸ್ಪಂದಿಸಿ, ಚರಂಡಿ ಸ್ವಚ್ಛತೆ, ರಸ್ತೆ ದುರಸ್ತಿ, ಕುಡಿಯುವ ನೀರು, ಆರೋಗ್ಯ ಹಾಗೂ ವಿದ್ಯುತ್​ ಸಮಸ್ಯೆಗೆ ಆದ್ಯತೆ ನೀಡಲಿ.

— ಮಾಳಪ್ಪ ತಾಲೂಕು ರೈತ ಸಂದ ಅಧ್ಯಕ್ಷ

ಚರಂಡಿಗಳಲ್ಲಿ ಕಸ ತುಂಬಿಕೊಂಡ ಹಿನ್ನೆಲೆಯಲ್ಲಿ ನೀರು ಹರಿಯದೆ ಮನೆ ಮುಂದೆ ನಿಂತು ದುರ್ವಾಸನೆ ಹಾಗೂ ಸೊಳ್ಳೆ ಕಾಟದಿಂದ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.

ಸ್ವಚ್ಛತೆ ತಡವಾಗಿದೆ ಎಂದ ಪಿಡಿಒ

ವಾಟದಹೊಸಹಳ್ಳಿಯ ಚರಂಡಿಗಳು ಸ್ವಚ್ಛಗೊಳಿಸದೆ ಇರುವ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್​ ಅವರನ್ನು ಸಂಪರ್ಕಿಸಿದಾಗ, ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಲ್ಲಿ ತಡವಾಗಿದೆ. ಗ್ರಾಮದಲ್ಲಿ ಉಂಟಾಗಿರುವ ಸಮಸ್ಯೆ ಗಮನಿಸಿ ಸ್ವಚ್ಛತಾ ಕಾರ್ಯ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಡಿ.ಎಸ್​.ಎಸ್​. ಮುಖಂಡ ನಂಜುಂಡಪ್ಪ ಮಾತನಾಡಿ, ಹಳ್ಳಿ ಸ್ವಚ್ಛತೆ ಹಾಗೂ ಜನರ ಆರೋಗ್ಯದ ವಿಚಾರದಲ್ಲಿ ಅಧಿಕಾರಿಗಳು ರ್ನಿಲಕ್ಷ$್ಯವಹಿಸಬಾರದು. ಚರಂಡಿಗಳಲ್ಲಿ ಕಸ ತುಂಬಿ ಕೊಳೆತು ನಾರುತ್ತಿದ್ದರೂ ಸ್ವಚ್ಛತೆ ಕೈಗೊಳ್ಳದಿರುವುದು ಖಂಡನೀಯ. ಕೂಡಲೇ ಚರಂಡಿ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಗ್ರಾಪಂ ಕಚೇರಿ ಮುಂದೆ ಗ್ರಾಮಸ್ಥರನ್ನು ಸಂಟಿಸಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವಾಟದಹೊಸಹಳ್ಳಿ ಚರಂಡಿ ಸಮಸ್ಯೆ ಬಗ್ಗೆ ಮಾಹಿತಿ ಪಡೆದು, ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಗುವುದು.

— ಜಿ.ಕೆ.ಹೊನ್ನಯ್ಯ ಇಒ

ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ
ಅಧಿಕಾರಿಗಳು ನೀಡಿದ ಭರವಸೆಯು ಭರವಸೆಯಾಗಿಯೇ ಉಳಿಯದೆ ತಕ್ಷಣ ಕಾರ್ಯರೂಪಕ್ಕೆ ಬರಬೇಕು. ಚರಂಡಿಗಳಲ್ಲಿ ಸಂಗ್ರಹವಾಗಿರುವ ಕಸ ತೆರವುಗೊಳಿಸಿ, ಕೊಳಚೆ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದರೊಂದಿಗೆ ನಿಯಮಿತವಾಗಿ ಸ್ವಚ್ಛತೆ ಕೈಗೊಳ್ಳಬೇಕು. ಸ್ವಚ್ಛತೆ ಹಾಗೂ ಆರೋಗ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.