ಕಲಬುರಗಿ: ಸ್ವಚ್ಛ ಭಾರತ ಮಿಷನ್ 2.0ರ ಅಡಿಯಲ್ಲಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಲಬುರಗಿ ಮಹಾನಗರ ಪಾಲಿಕೆಯು ಇದೇ ಮೇ 10ರಂದು ಕಲಬುರಗಿ ನಗರದಲ್ಲಿ ಬೃಹತ್ ಮ್ಯಾರಥಾನ್ ಹಾಗೂ ಸೈಕ್ಲೋಥಾನ್ ಆಯೋಜಿಸಿದೆ.
'ಸ್ವಚ್ಛ ಕಲಬುರಗಿ ಶಾಶ್ವತ ಸಮೃದ್ಧಿ' ಎಂಬ ಆಶಯದೊಂದಿಗೆ ಅಂದು ಬೆಳಿಗ್ಗೆ 7 ಗಂಟೆಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ನಗರದ ಅಂದ ಹೆಚ್ಚಿಸುವಲ್ಲಿ ನಾಗರಿಕರ ಪಾತ್ರ ಹಾಗೂ ಪರಿಸರ ಕಾಳಜಿಯ ಕುರಿತು ಅರಿವು ಮೂಡಿಸುವುದು ಈ ಓಟದ ಪ್ರಮುಖ ಗುರಿಯಾಗಿದೆ.
ಜಾಗೃತಿ ಓಟವು ನಗರದ ಜಗತ್ ವೃತ್ತದಿಂದ ಆರಂಭವಾಗಲಿದೆ. ಅಲ್ಲಿಂದ ಅನ್ನಪೂರ್ಣ ಕ್ರಾಸ್, ಲಾಹೋಟಿ ಪೆಟ್ರೋಲ್ ಬಂಕ್ ಹಾಗೂ ಮಾಂಗಳ್ಯ ಶೋರೂಮ್ ಮಾರ್ಗವಾಗಿ ಸಂಚರಿಸಿ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ (ತಿಮ್ಮಾಪುರ ವೃತ್ತ) ಸಮಾರೋಪಗೊಳ್ಳಲಿದೆ.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಸಾರ್ವಜನಿಕರಿಗೆ ಮುಕ್ತ ಆಹ್ವಾನ:
ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಅಭಿಯಾನದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮಹಾನಗರ ಪಾಲಿಕೆಯ ಪ್ರಕಟಣೆ ತಿಳಿಸಿದೆ.