ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್
- ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆಗೆ ಶರಣು
- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆ
- ಸಾವಿಗೂ ಮುನ್ನ ಆಡಿದ ಮಾತು ಕಡೆಗೂ ಈಡೇರಲಿಲ್ಲ
ಬೆಂಗಳೂರು: ಶುಕ್ರವಾರ (ಜ.30) ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ (Confident Group Chairman CJ Roy) ಆತ್ಮಹತ್ಯೆಗೆ ಶರಣಾದ ಪ್ರಕರಣ ಸದ್ಯ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ರಾಯ್ ಕಚೇರಿಯಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ರಾಜಕಾರಣಿಗಳು, ಸ್ಟಾರ್ ನಟ-ನಟಿಯರ ಹೆಸರುಗಳಿವೆ ಎಂದು ಹೇಳಲಾಗಿದೆ.
ಕಡೆಗೂ ಈಡೇರದೆ ಆಸೆ
ಪ್ರಸ್ತುತ, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಖಾಕಿ ಪಡೆ, ಹಲವು ಆಯಾಮಗಳಲ್ಲಿ ಕೇಸ್ ಅನ್ನು ಭೇದಿಸುತ್ತಿದೆ. ಮತ್ತೊಂದೆಡೆ, ಕೇರಳ ಚುನಾವಣೆಗೆ ರಾಯ್ ಫಂಡಿಂಗ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕೇಸ್ಗೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸರು ರಾತ್ರಿಯಿಡೀ ತನಿಖೆ ನಡೆಸಿದ್ದಾರೆ. ಇದೆಲ್ಲದರ ಮಧ್ಯೆ, ಮತ್ತೊಂದು ಸಂಗತಿ ಹೊರಬಿದ್ದಿದ್ದು, ರಾಯ್ ಸಾವಿಗೂ ಮುನ್ನ ಆಡಿದ ಮಾತೊಂದು ಕಡೆಗೂ ಈಡೇರದೆ ಹೋಗಿದೆ.
ಕ್ಯಾಬಿನ್ಗೆ ಹೋದ ರಾಯ್...
ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಆತ್ಮಹತ್ಯೆಗೆ ಶರಣಾಗುವ ಮೊದಲು ತಮ್ಮ ತಾಯಿಯೊಂದಿಗೆ ಮಾತನಾಡಲು ಬಯಸಿದ್ದರಂತೆ. ನಿನ್ನೆ (ಜ.30) ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಹೇಳಿಕೆ ನೀಡಲು ರಾಯ್ ಮತ್ತು ಕಾನ್ಫಿಡೆಂಟ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಟಿಎ ಜೋಸೆಫ್ ಕಚೇರಿಗೆ ಹೋಗಿದ್ದರು. ಅಲ್ಲಿಂದ ಬಂದ ಅವರು, ತಮ್ಮ ತಾಯಿಯೊಂದಿಗೆ ಮಾತನಾಡಬೇಕು ಎಂದಿದ್ದರಂತೆ. ಹೀಗೆಂದ ಕೆಲವು ಸಮಯದ ಬಳಿಕ ತಮ್ಮ ಕ್ಯಾಬಿನ್ಗೆ ಹೋದ ರಾಯ್, ಮತ್ತೆ ವಾಪಾಸ್ ಬರಲೇ ಇಲ್ಲ.
15 ನಿಮಿಷ ಬಳಿಕ...
ತಮ್ಮ ಕ್ಯಾಬಿನ್ಗೆ ರಾಯ್ ಹೋಗ್ತಿದ್ದಂತೆ ಅವರಿಗೆ ಸಮಯ ಕೊಟ್ಟ ಜೋಸೆಫ್ ಹೊರಗೆ ಹೋದರು. ಆದರೆ, ಸ್ವಲ್ಪ ಸಮಯದ ನಂತರ ಕ್ಯಾಬಿನ್ನೊಳಗೆ ಹೋಗಲು ಬಯಸಿದಾಗ ರಾಯ್ ಅವರ ಭದ್ರತಾ ಸಿಬ್ಬಂದಿ ಒಳಗೆ ಬಿಟ್ಟಿಲ್ಲ. ಕಾರಣ, ಸರ್ ಯಾರನ್ನೂ ಒಳಗೆ ಬಿಡಬೇಡಿ ಎಂದಿದ್ದರಂತೆ. ಮತ್ತೆ ಬಾಗಿಲು ಬಡಿದ ಜೋಸೆಫ್, ಯಾವಾಗ ರಾಯ್ ಅವರಿಂದ ಏನೂ ಪ್ರತಿಕ್ರಿಯೆ ಬರಲಿಲ್ಲವೋ, ಕೂಡಲೇ ಡೋರ್ ಅನ್ನು ಬಲವಂತವಾಗಿ ಒಡೆದು ನೋಡಿದಾಗ, ಅವರು ಕುರ್ಚಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ರಾಯ್ ಅವರ ಸಾವಿನ ಪ್ರಕರಣ ಕುರಿತು ಹೆಚ್ಚಿನ ವಿವರಗಳನ್ನು ಟಿಎ ಜೋಸೆಫ್, ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಫೆ.01ರಂದು ಅಂತ್ಯಕ್ರಿಯೆ
ಐಟಿ ಅಧಿಕಾರಿಗಳ ರೇಡ್, ತೀವ್ರ ಮಾನಸಿಕ ಒತ್ತಡದಿಂದ ರಾಯ್ ಸಾವಿಗೆ ಶರಣಾಗಿದ್ದಾರೆ ಎಂದು ಆರೋಪಿಸಿ ಅವರ ಕುಟುಂಬ ಮತ್ತು ಕಂಪನಿಯಿಂದ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ತನಿಖೆಯನ್ನು ಸಿಐಡಿಗೆ ವಹಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ. ರಾಯ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ (ಫೆ.01) ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದು, ಬೆಂಗಳೂರಿನ ಕೋರಮಂಗಲದಲ್ಲಿರುವ ವೈಟ್ ಹೌಸ್‌ನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ತಿಳಿಸಿದ್ದಾರೆ.