ಬಿಟುಮಿನ್ (ಡಾಂಬರು) ಸೇರಿ ವಿವಿಧ ನಿರ್ಮಾಣ ಸಾಮಗ್ರಿಗಳ ಬೆಲೆ ಹೆಚ್ಚಳ
ಬೆಂಗಳೂರು: ಬಿಟುಮಿನ್ (ಡಾಂಬರು) ಸೇರಿ ವಿವಿಧ ನಿರ್ಮಾಣ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿರುವ ಕಾರಣ ಪಂಚ ಪಾಲಿಕೆಗಳ ವಿವಿಧ ಭಾಗಗಳಲ್ಲಿ ಗುತ್ತಿಗೆದಾರರು 1,000 ಕೋಟಿ ರೂ. ಮೌಲ್ಯದ ರಸ್ತೆ ಮೂಲಸೌಕರ್ಯ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಇಸ್ರೇಲ್-ಇರಾನ್ ಯುದ್ಧ ಹಿನ್ನೆಲೆಯಲ್ಲಿ ಬಿಟುಮಿನ್ ಬೆಲೆ, ಪ್ರತಿ ಕ್ವಿಂಟಾಲ್‌ಗೆ 45 ಸಾವಿರ ರೂ. ನಿಂದ 92 ಸಾವಿರ ರೂ.ಗೆ ಏರಿಕೆಯಾಗಿದೆ. ಸಿಮೆಂಟ್, ಜಲ್ಲಿಕಲ್ಲು, ಉಕ್ಕು ದರ ಹೆಚ್ಚಳವಾಗಿದೆ. ಹೀಗಿರುವಾಗ, ಗುತ್ತಿಗೆ ನೀಡಿದ್ದ ಸಮಯದಲ್ಲಿ ನಮೂದಿಸಿದ ದರದಲ್ಲೇ ಕಾಮಗಾರಿ ನಡೆಸುವುದರಿಂದ ಗುತ್ತಿಗೆದಾರರಿಗೆ ಭಾರಿ ನಷ್ಟ ಉಂಟಾಗುತ್ತದೆ. ಈ ಕಾರಣ ಮುಂದಿಟ್ಟು ರಸ್ತೆ ಡಾಂಬರೀಕರಣ, ರಸ್ತೆಗುಂಡಿ ಮುಚ್ಚುವುದು ಹಾಗೂ ವೈಟ್ ಟಾಪಿಂಗ್ ಮತ್ತಿತರ ಕಾಮಗಾರಿಗಳನ್ನು ಗುತ್ತಿಗೆದಾರರು ನಿಲ್ಲಿಸಿದ್ದಾರೆ. ಇದರಿಂದ ನಗರದ ರಸ್ತೆ ನಿರ್ವಹಣೆ, ವಾಹನ ಸಂಚಾರ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಜತೆಗೆ, ಇನ್ನಷ್ಟು ರಸ್ತೆಗುಂಡಿಗಳ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದೆ.
ಹಳೆಯ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿರುವುದರಿಂದ ಸರ್ಕಾರದ ಮಧ್ಯಪ್ರವೇಶದಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಹೆಚ್ಚುವರಿ ವೆಚ್ಚದ ಹೊರೆಯನ್ನು ಸಂಪೂರ್ಣವಾಗಿ ಗುತ್ತಿಗೆದಾರರೇ ಹೊರದಂತೆ ಪ್ರಸ್ತುತ ಮಾರುಕಟ್ಟೆ ದರಗಳ ಆಧಾರದ ಮೇಲೆ ಡಾಂಬರು ಮತ್ತು ನಿರ್ಮಾಣ ಸಾಮಗ್ರಿಗಳ ದರವನ್ನು ಸರ್ಕಾರ ಪರಿಷ್ಕರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಗ್ರೇಟರ್ ಬೆಂಗಳೂರು ನಗರ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ. ನಂದಕುಮಾರ್ ಮಾತನಾಡಿ, ಜಿಬಿಎ 3 ತಿಂಗಳ ಅವಧಿಗೆ ಡಾಂಬರೀಕರಣ ಕಾಮಗಾರಿಗಳಿಗೆ ‘ಸ್ಟಾರ್ ರೇಟ್’ ಅನ್ವಯಿಸಲು ಆದೇಶ ಹೊರಡಿಸಿದ್ದರೂ ಅದನ್ನು ಪ್ರಾಯೋಗಿಕವಾಗಿ ಹೇಗೆ ಜಾರಿಗೆ ತರಬೇಕೆಂಬ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲ. ನೂತನ ಯೋಜನೆಗಳಿಗೆ ಮಾತ್ರವಲ್ಲದೆ ಈಗಾಗಲೇ ಟೆಂಡರ್ ನೀಡಿರುವ ಕಾಮಗಾರಿಗಳಿಗೂ ‘ಸ್ಟಾರ್ ರೇಟ್’ ವ್ಯವಸ್ಥೆ ವಿಸ್ತರಿಸಬೇಕು. ಹಳೆಯ ದರಗಳಲ್ಲೇ ಕೆಲಸ ಮುಂದುವರಿಸುವುದರಿಂದ ತಮಗೆ ಭಾರಿ ನಷ್ಟ ಉಂಟಾಗಲಿದೆ ಎಂದರು.