ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರ ಬಾಕಿ ಉಳಿದಿರುವ ಸಂಬಳ ಪಾವತಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಶಹಾಬಾದ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ನೀಲಪ್ರಭ ಬಬಲಾದ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಮರಿಯಪ್ಪ ಹಳ್ಳಿ, ಪೂಜಪ್ಪ ಮೇತ್ರಿ, ಮಲ್ಲಣ್ಣ ಮಸ್ಕಿ, ನರಸಿಂಹಲು ರಾಯಚೂರಕರ್, ಶಿವಮೂರ್ತಿ ಪಟ್ಟಿದಾರ, ಮಲ್ಲಣ್ಣ ಮರತೂರ ಇತರರಿದ್ದರು.
- ಶಹಾಬಾದ್ ನಗರಸಭೆ ಎದುರು ದಸಂಸ ಪ್ರತಿಭಟನೆ
- ತಿಂಗಳೊಳಗೆ ಪಾವತಿಸದಿದ್ರೆ ಅನಿರ್ದಿಷ್ಟ ಉಪವಾಸ
ಶಹಾಬಾದ್ :ಬೇಸರವಿಲ್ಲದೆ ದಿನನಿತ್ಯ ನಗರದಲ್ಲಿ ಕುಡಿಯುವ ನೀರು ಮತ್ತು ಕಸ ವಿಲೇವಾರಿ ಕೆಲಸ ಮಾಡುವ ಪೌರಕಾರ್ಮಿಕರ ಬದುಕು ಕಷ್ಟಕರವಾಗಿದೆ. ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರ ಸಂಬಳ 14 ತಿಂಗಳಿಂದ ನೀಡದೆ ನಗರಸಭೆ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಆರೋಪಿಸಿದರು.
ಸಮಿತಿ ನೇತೃತ್ವದಲ್ಲಿ ದಿನಗೂಲಿ ಮತ್ತು ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಆಗ್ರಹಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಅವರು, ನಗರಸಭೆ ದಿನಗೂಲಿ ನೌಕರರಿಗೆ 14 ತಿಂಗಳು ಹಾಗೂ ಹೊರಗುತ್ತಿಗೆ ನೌಕರರಿಗೆ 12 ತಿಂಗಳ ಸಂಬಳ ನೀಡದೆ ಯಂತ್ರದಂತೆ ಕೆಲಸ ಮಾಡಲು ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಎಲ್ಲ ಕಾಮಗಾರಿಗಳ ಬಿಲ್ ಸಕಾಲಕ್ಕೆ ಪಾಸ್ ಆಗುತ್ತವೆ. ಆದರೆ ನೌಕರರ ಸಂಬಳ ನಿಲ್ಲುತ್ತದೆ. ಕಮಿಷನ್ ಕೊಟ್ಟರೆ ಮಾತ್ರ ಸಂಬಳ ಮಾಡುತ್ತೇವೆ ಅನ್ನುವ ಸ್ಥಿತಿ ಇದೆ. ತಿಂಗಳಲ್ಲಿ ಸಂಬಳ ಪಾವತಿ ಮಾಡದಿದ್ದಲ್ಲಿ ಕಾರ್ಮಿಕರ ಕುಟುಂಬದೊಂದಿಗೆ ಅರ್ನಿದಿಷ್ಟ ಉಪವಾಸ ನಡೆಸಬೇಕಾದೀತು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ನೀಲಪ್ರಭ ಬಬಲಾದ, ಪೌರಾಯುಕ್ತ ಫಕ್ರೋದ್ದಿನ್ ಮನವಿಪತ್ರ ಸ್ವೀಕರಿಸಿ ಮಾತನಾಡಿ, ಹೊರಗುತ್ತಿಗೆ ನೌಕರರಿಗೆ ಒಂದು ತಿಂಗಳ ಮತ್ತು ದಿನಗೂಲಿ ನೌಕರರಿಗೆ ಎರಡು ತಿಂಗಳ ಸಂಬಳ ತಿಂಗಳೊಳಗೆ ನೀಡಲಾಗುವುದು. ಅಕೌಂಟೆಂಟ್ ನಾರಾಯಣರೆಡ್ಡಿ ವರ್ಗಾವಣೆ ಕುರಿತು ಡಿಸಿ ಗಮನಕ್ಕೆ ತರುತ್ತೇವೆ. ಇತರೆ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ ಬಳಿಕ ಧರಣೆ ಹಿಂಪಡೆಯಲಾಯಿತು.
ಪ್ರಮುಖರಾದ ಮರೆಪ್ಪ ಮೇತ್ರಿ, ಪೂಜಪ್ಪ ಮೇತ್ರಿ, ಮಲ್ಲಣ್ಣ ಮಸ್ಕಿ, ನರಸಿಂಹಲು ರಾಯಚೂರಕರ್, ಶಿವಮೂರ್ತಿ ಪಟ್ಟಿದಾರ, ಮಲ್ಲಣ್ಣ ಮರತೂರು, ಹನುಮಂತ ಪವಾರ್, ಈರಣ್ಣ ಕುರಿ, ಅನೀಲ ಹೊನಗುಂಟಿಕರ್, ಬಲಭೀಮ ಪವಾರ್, ರವಿ ರಾಠೋಡ್, ಉದಯಕುಮಾರ ಸಾಗರ, ಮಲ್ಲಿಕಾರ್ಜುನ ಕಟ್ಟಿಮನಿ ಇತರರಿದ್ದರು. ಪಿಎಸ್ಐ ಚಂದ್ರಕಾಂತ ಮೇಕಾಲೆ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.