ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ, ರಂಗ ಶಂಕರ ಸಂಸ್ಥೆಯ ಆರುಂಧತಿ ನಾಗ, ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶಂಕ್ರಮ್ಮ ಡವಳಗಿ ಸೇರಿದಂತೆ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು. 
ರಾಜ್ಯ

‘ಸರ್ಕಲ್ ಆಫ್ ಲೈಫ್,’ ಮಾತಿಲ್ಲದ ಪಪೆಟ್ ನಾಟಕ ರಂಗಾಯಣದಲ್ಲಿ ಪ್ರದರ್ಶಿಸಲಾಯಿತು

ಕಲಬುರಗಿ: ಕಲಬುರಗಿ ನಾಟಕೋತ್ಸವ–2026ರ ಅಂಗವಾಗಿ ಫೆಬ್ರವರಿ 22ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ರಂಗಾಯಣದಲ್ಲಿ ‘ಸರ್ಕಲ್ ಆಫ್ ಲೈಫ್’,ಎಂಬ ಮಾತಿಲ್ಲದ ಪಪೆಟ್ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಈ ನಾಟಕವನ್ನು ರಂಗ ಶಂಕರ ನಿರ್ಮಿಸಿದ್ದು, ಸುರೇಂದ್ರನಾಥ ಎಸ್. ಅವರು ನಿರ್ದೇಶನ ವಹಿಸಿದ್ದರು.
ಮಾತುಗಳಿಲ್ಲದೆ ಕೇವಲ ಪಪೆಟ್‌ಗಳ ಚಲನೆ, ಭಾವಾಭಿನಯ ಮತ್ತು ದೃಶ್ಯ ಸಂಕೇತಗಳ ಮೂಲಕ ಮಾನವ ಜೀವನದ ಸೌಂದರ್ಯವನ್ನು ನಾಟಕವು ಮನಮುಟ್ಟುವಂತೆ ಚಿತ್ರಿಸಿತು. ಬಾಲ್ಯದಿಂದ ಯೌವನ, ನಂತರ ವೃದ್ಧಾಪ್ಯದವರೆಗೆ ಸಾಗುವ ಮಾನವ ಜೀವನದ ಚಕ್ರವನ್ನು ಈ ನಾಟಕವು ಸರಳವಾದರೂ ಗಾಢ ಅರ್ಥಪೂರ್ಣವಾಗಿ ಪ್ರೇಕ್ಷಕರ ಮುಂದಿಟ್ಟಿತು. ಮಗು ಹಿರಿಯನಾಗುವುದು, ಹಿರಿಯನು ಮತ್ತೆ ಮಗುವಿನಂತಹ ನಿರ್ದೋಷಿತ ಮನಸ್ಥಿತಿಗೆ ತಲುಪುವುದು ಎಂಬ ಜೀವನದ ಸಹಜ ಪರಿವರ್ತನೆಗಳನ್ನು ನಾಟಕವು ಸ್ಪಷ್ಟವಾಗಿ ತೋರಿಸಿತು.
ಮಾನವ ಜೀವನದ ಪ್ರತಿಯೊಂದು ಹಂತವೂ ತನ್ನದೇ ಆದ ಮಹತ್ವ ಹಾಗೂ ಕೊಡುಗೆಯನ್ನು ಹೊಂದಿದೆ ಎಂಬ ಸಂದೇಶವನ್ನು ಈ ಪಪೆಟ್ ನಾಟಕ ಸಾರಿತು. ಪ್ರಕೃತಿ ಹೇಗೆ ನಮ್ಮ ಬದುಕಿನ ಪ್ರತಿಕ್ಷಣದಲ್ಲೂ ನಮ್ಮನ್ನು ಪೋಷಿಸುತ್ತದೆಯೋ, ಅದೇ ರೀತಿ ಸಮಾಜವು ಬಾಲ್ಯ, ಯೌವನ ಹಾಗೂ ವೃದ್ಧಾಪ್ಯ ಎಂಬ ಪ್ರತಿಯೊಂದು ಹಂತವನ್ನೂ ಗೌರವಿಸಿ, ಸಂರಕ್ಷಿಸಬೇಕು ಎಂಬ ಆಶಯವನ್ನು ನಾಟಕವು ಒತ್ತಿ ಹೇಳಿತು. ಪರಿಸರ ಸಂರಕ್ಷಣೆ ಹಾಗೂ ಮಾನವೀಯ ಮೌಲ್ಯಗಳ ನಡುವಿನ ಸಂಬಂಧವನ್ನೂ ಕಲಾತ್ಮಕವಾಗಿ ಮೂಡಿಸಲಾಯಿತು.
ಮಕ್ಕಳಿಗಾಗಿ ವಿಶೇಷವಾಗಿ ಆಯೋಜಿಸಲಾದ ಈ ಪ್ರದರ್ಶನವು ಮಕ್ಕಳಷ್ಟೇ ಅಲ್ಲದೆ ಪೋಷಕರಿಗೂ ಚಿಂತನೆಗೆ ದಾರಿ ಮಾಡಿಕೊಟ್ಟಿತು. ಪಪೆಟ್‌ಗಳ ಮೂಲಕ ವ್ಯಕ್ತವಾದ ಭಾವನೆಗಳು ಮಕ್ಕಳ ಮನಸ್ಸಿನಲ್ಲಿ ಆಳವಾದ ಪ್ರಭಾವ ಮೂಡಿಸಿದವು. ಕಲಬುರಗಿ ನಾಟಕೋತ್ಸವದ ಭಾಗವಾಗಿ ನಡೆದ ಈ ಪಪೆಟ್ ನಾಟಕವು ಮಕ್ಕಳಲ್ಲಿ ಕಲೆಯ ಮೇಲಿನ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಜೀವನ ಮೌಲ್ಯಗಳ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿತು.