ಹನೂರು ಶೂಟೌಟ್, ದಾಂಧಲೆ ಪ್ರಕರಣ ಸಿಐಡಿ ಹೆಗಲಿಗೆ: ಡಿಜಿಪಿ ಎಂ.ಎ ಸಲೀಂ ಆದೇಶ! Hanur Shootout Case
- ಹನೂರು ಶೂಟೌಟ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಡಿಜಿಪಿ
- ಕಾವೇರಿ ವನ್ಯಜೀವಿಧಾಮ ಗುಂಡಿನ ದಾಳಿ ಪ್ರಕರಣದ ಸಮಗ್ರ ತನಿಖೆ ಆರಂಭ
- ಹನೂರು ಹಾಗೂ ರಾಮಾಪುರ ಠಾಣೆಯ ನಾಲ್ಕೂ ಎಫ್ಐಆರ್ ಸಿಐಡಿಗೆ ವರ್ಗಾವಣೆ
- ಆಗಸ್ಟ್ 15 ರಂದು ಅರಣ್ಯ ಇಲಾಖೆ ಸಿಬ್ಬಂದಿ ದಾಳಿಯಲ್ಲಿ ಮೂವರು ಸಾವು
- ಮರಿಯಮಂಗಲ ಶೂಟೌಟ್ ಪ್ರಕರಣದ ಸತ್ಯಾಸತ್ಯತೆ ಶೀಘ್ರವೇ ಹೊರಬೀಳುವ ನಿರೀಕ್ಷೆ
ಚಾಮರಾಜನಗರ: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಆ. 15 ರಂದು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ( Hanur Shootout Case ) ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ಮರಿಯಮಂಗಲ ಬೀಟ್ ನಲ್ಲಿ ನಡೆದಿರುವ ಶೂಟೌಟ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಸಲೀಂ ಅವರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಆದೇಶಿಸಿದ್ದಾರೆ.
ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರು , ರಾಮಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ನಾಲ್ಕೂ ಎಫ್‌ಐಆರ್‌ಗಳ ತನಿಖೆಯನ್ನು ಸಹ ಸಿಐಡಿಗೆ ವರ್ಗಾಯಿಸಲಾಗಿದೆ.
ಈ ಸಂಬಂಧ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಿಐಡಿಯ ವಿಶೇಷ ಘಟಕದಿಂದ ಮುಂದಿನ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಈ ಸಮಗ್ರ ತನಿಖೆ ನಡೆದ ಬಳಿಕ ಶೂಟೌಟ್ ಪ್ರಕರಣದ ಸತ್ಯಾಸತ್ಯತೆ ಹೊರಬೀಳುವ ನಿರೀಕ್ಷೆ ಇದೆ.
ಏನಿದು ಪ್ರಕರಣ?
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಆಗಸ್ಟ್ 15ರ ನಸುಕಿನ ಜಾವ ನಡೆದ ಗುಂಡಿನ ಕಾಳಗದಲ್ಲಿ ಮೂವರು ಮೃತಪಟ್ಟರು. ಮೃತರನ್ನು ಕಳ್ಳಬೇಟೆಗಾರರು ಎನ್ನಲಾಗಿದೆ. ಬೇಟೆಯ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗೂ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೃತರನ್ನು ಹನೂರು ತಾಲೂಕಿನ ಮರಿಯ ಮಂಗಲದ ರೈತ ಆಂತೋಣಿ ಸ್ವಾಮಿ (50), ಜಗನ್ನಾಥದೊಡ್ಡಿಯ ರೈತ ಜಾನ್ ರೋಸ್ ಪೀಟರ್ (42) , ಲಾಸರ್ದೊಡ್ಡಿಯ ಹಿಟಾಚಿ ಆಪರೇಟರ್ ಕುಮಾರ್(33) ಎಂದು ಗುರುತಿಸಲಾಗಿದೆ. ಆದರೆ, ಮೃತರು ಬೇಟೆಗೆ ಹೋಗಿರಲಿಲ್ಲ, ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನೆಯು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕರ್ನಾಟಕ ಮತ್ತು ತಮಿಳುನಾಡು ವಿಧಾನಸಭೆಯಲ್ಲಿಯೂ ಧ್ವನಿ ಎತ್ತಲಾಯಿತು.