ಚಿತ್ತಾಪುರದಲ್ಲಿ ಸೂಫಿ ಸಂತ ಹಜರತ್ ಚಿತ್ತಾಷಾವಲಿ ದರ್ಗಾದ 799ನೇ ಉರುಸ್ ನಿಮಿತ್ತ ಗಂಧದ ಮೆರವಣಿಗೆ ಸಂಭ್ರಮದಿಂದ ನಡೆಯಿತು.
ಚಿತ್ತಾಪುರ: ಸೂಫಿ ಸಂತ ಹಜರತ್ ಚಿತ್ತಾಷಾವಲಿ ದರ್ಗಾದ 799ನೇ ಉರುಸ್ ನಿಮಿತ್ತ ಶನಿವಾರ ರಾತ್ರಿ ಅಸಂಖ್ಯಾತ ಭಕ್ತರ ಜೈೂಷದೊಂದಿಗೆ ಅದ್ದೂರಿಯಾಗಿ ಗಂಧದ (ಸಂದಲ್) ಮೆರವಣಿಗೆ ಜರುಗಿತು.
ಬೆಳಗ್ಗೆ ನಾಗಣ್ಣ ಮಾಸ್ಟರ್ ಬಳ್ಳಾ ಅವರ ಮನೆಯಲ್ಲಿ ಸಾಮೂಹಿಕ ಪ್ರಾರ್ಥನೆ (ಫಾತೆಹಾ) ಜರುಗಿತು. ವಿಶೇಷ ಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ರಾತ್ರಿ 10ಕ್ಕೆ ಬಳ್ಳಾ ಮನೆಯಿಂದ ಗಲಾಫ್ ಮೆರವಣಿಗೆಯು ಮುತ್ತುವಲ್ಲಿ ಸೈಯದ್ ಮಿನಾಜುದ್ದೀನ್ ಚಿಸ್ತಿ ಮನೆಗೆ ತಲುಪಿತು. ವಿಶೇಷ ಪ್ರಾರ್ಥನೆ ಬಳಿಕ ಮೌಲ್ವಿಗಳಿಂದ ಗಂಧಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ 11ಕ್ಕೆ ಚಿಸ್ತಿ ಮನೆಯಿಂದ ಪ್ರಾರಂಭವಾದ ಗಂಧದ ಮೆರವಣಿಗೆಯೂ ತೆಳಗೇರಿ, ಭುವನೇಶ್ವರಿ ಚೌಕ್, ಜನತಾ ಚೌಕ್, ಕಿರಾಣಾ ಬಜಾರ್, ಕಪಡಾ ಬಜಾರ್, ಚಿತ್ತಾವಲಿ ಚೌಕ್ ಮೂಲಕ ಬೆಳಗ್ಗೆ 5ಕ್ಕೆ ಚಿತ್ತಾಷಾವಲಿ ದರ್ಗಾಕ್ಕೆ ತಲುಪಿತು. ಗಂಧದ ಲೇಪನ ಕಾರ್ಯ ಜರುಗಿತು. ಮೆರವಣಿಗೆಯುದ್ದಕ್ಕೂ ಎರಡು ಒಂಟೆಗಳು, ಕುದುರೆ, ಯುವಕರ ಕಟ್ಟಿಗೆ ಆಟ, ಭಕ್ತಿ ಪ್ರಧಾನ ಹಾಡುಗಳು ಜನಮನ ಸೆಳೆದವು.
ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಸೈಯದ್ ಸೇಟ್ ಚಿಸ್ತಿ ಮಾತನಾಡಿ, ವೈರತ್ವಗಳು ಹೊಡೆದೊಡಿಸಲು ಹಾಗೂ ಪ್ರೀತಿಯಿಂದ ಬದುಕು ನಡೆಸಲು ಜಾತ್ರೆ, ಉರುಸ್ ಸಹಕಾರಿಯಾಗಲಿವೆ. ಸಂದಲ್ ಮೆರವಣಿಗೆಯಲ್ಲಿ ಹಿಂದೂ&ಮುಸ್ಲಿಮರು ಭಾವೈಕ್ಯತೆಯೊಂದಿಗೆ ಭಾಗವಹಿಸಿದ್ದಾರೆ. ಅಸಂಖ್ಯಾತ ಜನರು ದರ್ಗಾಕ್ಕೆ ನೈವೇದ್ಯ ಸಲ್ಲಿಸಿ ಭಕ್ತಿ ಮೆರೆದಿದ್ದಾರೆ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಪ್ರಮುಖರಾದ ಮಲ್ಲರೆಡ್ಡಿ ಗೋಪಸೇನ್, ಮಿನಾಜುದ್ದಿನ್ ಚಿಸ್ತಿ, ಸೈಯದ್ ಸೇಟ್ ಚಿಸ್ತಿ, ನಿಜಾಮೋದಿನ್ ಚಿಸ್ತಿ, ರಾಜಶೇಖರ ಬಳ್ಳಾ, ಚಂದ್ರಶೇಖರ ಬಳ್ಳಾ, ನಾಗರೆಡ್ಡಿ ಗೋಪಸೇನ್, ಸುರೇಶ ಅಳೊಳ್ಳಿ, ಮಹ್ಮದ್ ಇಬ್ರಾಹಿಂ, ರಾಜಣ್ಣ ಕರದಾಳ, ಚಂದ್ರಶೇಖರ ಕಡೆಸೂರ ಇತರರಿದ್ದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಸಿದ್ದಬಸವನಗೌಡ ಪಾಟೀಲ, ಪಿಎಸ್ಐಗಳಾದ ಮಂಜುನಾಥರೆಡ್ಡಿ, ತಿರುಮಲೇಶ, ರೇಣುಕಾ, ಸಿದ್ದಲಿಂಗ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.