ಚಿತ್ರದುರ್ಗ ಬಸ್​ ದುರಂತ: ಚಿಕಿತ್ಸೆ ಫಲಿಸದೇ ಬಸ್​ ಚಾಲಕ ಸಾವು 
ರಾಜ್ಯ

ಚಿತ್ರದುರ್ಗ ಬಸ್​ ದುರಂತ: ಚಿಕಿತ್ಸೆ ಫಲಿಸದೇ ಬಸ್​ ಚಾಲಕ ಸಾವು, ಮೃತರ ಸಂಖ್ಯೆ 7ಕ್ಕೇ ಏರಿಕೆ! Chitradurga Bus Accident

ಪ್ರಮುಖ ಮುಖ್ಯಾಂಶಗಳು

  • ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವನಗೊಂಡನ ಹಳ್ಳಿಯಲ್ಲಿ ನಡೆದ ಖಾಸಗಿ ಬಸ್​ ದುರಂತ
  • ಗಂಭೀರವಾಗಿ ಗಾಯಗೊಂಡಿದ್ದ ಖಾಸಗಿ ಬಸ್​ ಚಾಲಕ ಚಿಕಿತ್ಸೆ ಫಲಿಸದೇ ಇಂದು ಸಾವು
  • ಬಸ್​ ಚಾಲಕ ರಫೀಕ್​ ಸಾವಿನ ಬಳಿಕ 7ಕ್ಕೇ ಏರಿದ ಮೃತಪಟ್ಟವರ ಸಂಖ್ಯೆ
ಚಿತ್ರದುರ್ಗ: ಹಿರಿಯೂರು ತಾಲೂಕಿನ ಜವನಗೊಂಡನ ಹಳ್ಳಿ ಎಚ್​ಪಿ ಪೆಟ್ರೋಲ್ ಬಂಕ್ ಬಳಿ ನಿನ್ನೆ (ಡಿ.25) ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ಖಾಸಗಿ ಬಸ್ ಹಾಗೂ ಕಂಟೇನರ್​ ನಡುವೆ ನಡೆದ ಭೀಕರ ಅಪಘಾತ ( Chitradurga Bus Accident ) ದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಾಸಗಿ ಬಸ್​ ಚಾಲಕ ಚಿಕಿತ್ಸೆ ಫಲಿಸದೇ ಇಂದು (ಡಿ.26) ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ 7ಕ್ಕೇ ಏರಿದೆ. 
ಪ್ರಯಾಣಿಕರೆಲ್ಲರು ಗಾಢ ನಿದ್ರೆಯಲ್ಲಿರುವಾಗಲೇ ಈ ಘೋರ ದುರಂತ ನಿನ್ನೆ ಘಟಿಸಿ ಹೋಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಸ್​ ಚಾಲಕ ಮಹಮದ್ ರಫೀಕ್ ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ರಫೀಕ್​ ಅವರ ಎರಡು ಕಾಲು ಹಾಗೂ ಒಂದು ಕೈ ಮುರಿತವಾಗಿತ್ತು. ರಾತ್ರಿ ಆಪರೇಷನ್ ಮಾಡುವ ವೇಳೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಮೃತರ ವಿವರ

ಬೆಂಗಳೂರಿನ ಬಿಂದು (29), ಇವರ 5 ವರ್ಷದ ಪುತ್ರಿ ಗ್ರೇಯಾ, ರಶ್ಮಿ ಮಹಾಲೆ(24), ಚನ್ನರಾಯಪಟ್ಟಣದ ಮಾನಸ (27), ನವ್ಯಾ (26) ಲಾರಿ ಚಾಲಕ ಕುಲೀಪ್ ಯಾದವ್ (29).

ಅಪಘಾತ ಹೇಗಾಯಿತು? 

ಬೆಂಗಳೂರಿಂದ ಕುಮಟಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್​ಗೆ ಚಿತ್ರದುರ್ಗ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಂಟೇನರ್​ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಬಂದು ಬಸ್​ಗೆ​ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಡೀಸೆಲ್‌ ಟ್ಯಾಂಕ್ ಹಾನಿಗೀಡಾಗಿ ಬೆಂಕಿ ಹೊತ್ತಿದೆ. ಈ ಅವಘಡದಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. 

ಸಿಎಂ ಪರಿಹಾರ ಘೋಷಣೆ

ಚಿತ್ರದುರ್ಗದಲ್ಲಿ‌ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ನೀಡಲಾಗುವುದು. ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸೂಚಿಸಿದ್ದೇನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಪಘಾತಕ್ಕೆ ಕಾರಣ ಪತ್ತೆಹಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.  

ಪ್ರಧಾನಿ ಮೋದಿ ಸಂತಾಪ

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ತೀವ್ರ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ, ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. 

ಇಲ್ಲಿಯವರೆಗೆ ಒಟ್ಟು 7 ಮಂದಿ ಮೃತ

ಆರಂಭದಲ್ಲಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 17 ಎನ್ನಲಾಗಿತ್ತು. ಆದರೆ, ಮೃತದೇಹಗಳನ್ನು ಹೊರತೆಗೆಯುವ ಕಾರ್ಯಕ್ಕೆ ಮುಂದಾದಾಗ ಸಂಖ್ಯೆಯಲ್ಲಿ ಬದಲಾವಣೆಗೊಂಡಿತು. ಇತ್ತೀಚಿನ ವರದಿಗಳ ಪ್ರಕಾರ, ಕಂಟೇನರ್​ ಚಾಲಕ ಹಾಗೂ ಬಸ್​ ಚಾಲಕ ಸೇರಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ.