Morarji Residential School student three months pregnant
- 9ನೇ ತರಗತಿ ವಿದ್ಯಾರ್ಥಿ ಮೂರು ತಿಂಗಳ ಗರ್ಭಿಣಿ, ಆರೋಪಿಗಾಗಿ ಹುಡುಕಾಟ.
- ಚಂದ್ರು ಎಂಬಾತನಿಂದ ಕಳೆದ ಒಂದು ವರ್ಷದಿಂದ ಬಾಲಕಿ ಮೇಲೆ ಅತ್ಯಾಚಾರ.
- ಚಿಂತಾಮಣಿ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಘಟನೆ.
ಚಿಂತಾಮಣಿ: ಇತ್ತೀಚೆಗೆ ಉತ್ತರ ಕನ್ನಡದ ಶಿರಸಿ ಹಾಸ್ಟೆಲ್ನಲ್ಲಿ ಬಾಲಕಿಯೊಬ್ಬಳು ಮಗುವಿಗೆ ಜನ್ಮ ಕೊಟ್ಟು, ಅದನ್ನು ಕಿಟಕಿಯಿಂದ ಹೊರ ಹಾಕಿದ್ದ ಘಟನೆ ನಡೆದಿತ್ತು. ಆ ಬೆನ್ನಲ್ಲೇ ಚಿಕ್ಕಬಳ್ಳಾಪುರದ ಚಿಂತಾಮಣಿ (Chintamani) ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡುಕ ಹುಟ್ಟಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹೌದು ಇಲ್ಲಿನ ಮೊರಾರ್ಜಿ ವಸತಿ ಶಾಲೆಯ 9ನೇ ತರಗತಿಯ 14 ವರ್ಷದ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಚಂದ್ರು ಎಂಬಾತನಿಂದ ಬಾಲಕಿ ಮೇಲೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು, ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಜೀವಬೆದರಿಕೆ, ಅತ್ಯಾಚಾರ
9ನೇ ತರಗತಿಯ ಬಾಲಕಿಯ ಪೋಷಕರು ಕುರಿ ಮೇಯಿಸಲು ಹೋದಾಗ ಮನೆ ನುಗ್ಗುವ ಚಂದ್ರು ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಇಷ್ಟೇ ಅಲ್ಲದೇ, ಈ ಬಗ್ಗೆ ಯಾರ ಬಳಿಯಾದರೂ ದೂರು ಕೊಟ್ಟರೆ ಕೊಲೆ ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದನಂತೆ.
ಗರ್ಭಿಣಿ ಎಂದು ತಿಳಿದಿದ್ದು ಹೇಗೆ?
ಬಾಲಕಿ ಕಳೆದ ಮೂರು ತಿಂಗಳಿನಿಂದ ಮುಟ್ಟಾಗಿರಲಿಲ್ಲ. ಹೀಗಾಗಿ ಪೋಷಕರಿಗೆ ಅನುಮಾನ ಬಂದಿದೆ. ಏನೋ ಸಮಸ್ಯೆಯಾಗಿದೆ ಎಂದು ತಿಳಿದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದಾಗ ಅಪ್ರಾಪ್ತ ಬಾಲಕಿ 3 ತಿಂಗಳ ಗರ್ಭಿಣಿ ಎಂಬ ಆಘಾತಕಾರಿ ಸತ್ಯ ಬಹಿರಂಗಗೊಂಡಿದೆ.
ಪ್ರತಿ ತಿಂಗಳು ಮೊರಾರ್ಜಿ ದೇಸಾಯಿ ಹಾಸ್ಟೆಲ್ನಲ್ಲಿ ಮಕ್ಕಳ ವೈದ್ಯಕೀಯ ತಪಾಸಣೆ ನಡೆಸಬೇಕು ಎನ್ನುವ ನಿಯಮವಿದೆ. ಆದರೆ, ಹಾಸ್ಟೆಲ್ ಸಿಬ್ಬಂದಿ ಈ ನಿಯಮ ಗಾಳಿಗೆ ತೂರಿದ್ದಾರೆ. ಸರ್ಕಾರ ರೂಲ್ಸ್ ಪಾಲಿಸಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಸದ್ಯ ಆರೋಪಿ ಚಂದ್ರು ವಿರುದ್ಧ ದಿಬ್ಬೂರಹಳ್ಳಿ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ಸಂತ್ರಸ್ತೆಯನ್ನು ಬಾಲಮಂದಿರದ ಆಶ್ರಯದಲ್ಲಿ ಇರಿಸಲಾಗಿದೆ. ವೈದ್ಯಕೀಯ ಚಿಕಿತ್ಸೆಗಳು ನೀಡಲಾಗುತ್ತಿದೆ, (ಏಜೆನ್ಸೀಸ್).