ಚಿಂಚೋಳಿಯಲ್ಲಿ ಶುಕ್ರವಾರ ನಡೆದ ವಿಚಾರ ಸಂಕಿರಣದಲ್ಲಿ ಚಿಂಚೋಳಿ ತಾಲೂಕು ದರ್ಶನ ಕೃತಿಯನ್ನು ಮಲ್ಲಿಕಾರ್ಜುನ ಪಾಲಮೂರ ಬಿಡುಗಡೆ ಮಾಡಿದರು. ಡಾ.ಶರಣಬಸಪ್ಪ ವಡ್ಡನಕೇರಿ, ಡಾ.ದಿವ್ಯಾ ವಾಡಿ, ಜಗನ್ನಾಥ ಶೇರಿಕಾರ, ಡಾ.ವೀರಶೆಟ್ಟಿ ಗಾರಂಪಳ್ಳಿ ಇತರರಿದ್ದರು 
ರಾಜ್ಯ

ಚಿಂಚೋಳಿ ಐತಿಹಾಸಿಕ ಮಹತ್ವದ ತಾಣ

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಡಾ.ಶರಣಬಸಪ್ಪ ವಡ್ಡನಕೇರಿ ಅನಿಸಿಕೆ
  • ಇತಿಹಾಸ-ಸಂಸ್ಕೃತಿ ಕುರಿತ ವಿಚಾರ ಸಂಕಿರಣ
ಚಿಂಚೋಳಿ: ಭೌಗೋಳಿಕವಾಗಿ ಅತ್ಯಂತ ಸುಂದರ ತಾಣವಾಗಿರುವ ಚಿಂಚೋಳಿ ತಾಲೂಕು ಹೈದರಾಬಾದ್​ ನಿಜಾಮನ ಕಾಲ ಮತ್ತು ನಂತರವೂ ಐತಿಹಾಸಿಕವಾಗಿ ಮಹತ್ವ ಪಡೆದಿದೆ ಎಂದು ಖಾಜಾ ಬಂದಾನವಾಜ್​ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶರಣಬಸಪ್ಪ ವಡ್ಡನಕೇರಿ ಹೇಳಿದರು.
ಪಟ್ಟಣದ ಸಿ.ಬಿ.ಪಾಟೀಲ್​ ಕಾಲೇಜಿನಲ್ಲಿ ಇತಿಹಾಸ ವಿಭಾಗ ಮತ್ತು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂದ ಸಹಯೋಗದಡಿ ಶುಕ್ರವಾರ ಏರ್ಪಡಿಸಿದ್ದ ಚಿಂಚೋಳಿ ತಾಲೂಕಿನ ಇತಿಹಾಸ ಮತ್ತು ಸಂಸ್ಕೃತಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಮಹತ್ವದ ಚರಿತ್ರೆಯನ್ನು ಚಿಂಚೋಳಿ ತಾಲೂಕು ದರ್ಶನ ಕೃತಿ ಮೂಲಕ ಕಟ್ಟಿಕೊಟ್ಟಿರುವ ಸಹಾಯಕ ಪ್ರಾಧ್ಯಾಪಕಿ ಡಾ.ದಿವ್ಯಾ ವಾಡಿ ಹಾಗೂ ಇಂಗ್ಲಿಷ್​ ಅವತರಣಿಕೆ ಹೊರತಂದ ಡಾ.ರಾಮಕೃಷ್ಣ ಅಭಿನಂದನಾರ್ಹರು ಎಂದರು.
ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಮೂರ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಉಪನ್ಯಾಸ ನೀಡಿದ ಪತ್ರಕರ್ತ ಜಗನ್ನಾಥ ಶೇರಿಕಾರ, ಇತಿಹಾಸ ಸಂಸ್ಕೃತಿಯನ್ನು ಬೆಳೆಸುತ್ತದೆ. ಸಂಸ್ಕೃತಿ ಇತಿಹಾಸಕ್ಕೆ ಜೀವ ತುಂಬುತ್ತದೆ. ಹೀಗಾಗಿ ಇತಿಹಾಸ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೇಳಿದರು.
ಚಿಂಚೋಳಿ ತಾಲೂಕು ಗೊಟ್ಟಂಗೊಟ್ಟ, ನಾಗಾಈದಲಾಯಿ, ಮೊಂಬಾಪುರ, ಬೋನಸಪುರ, ಮೊರ್ನಾಳ್​ ಪ್ರಾಗೈತಿಹಾಸಿಕ ಕಾಲದ ಜನವಸತಿ ಪ್ರದೇಶವಾಗಿದ್ದರೆ, ನಿಡಗುಂದಾದ ಸೂರ್ಯನಾರಾಯಣ ದೇವಾಲಯ ಐತಿಹಾಸಿಕವಾಗಿ ಬಹಳ ಪ್ರಾಮುಖ್ಯ ಪಡೆದಿದೆ. ದೇವಾಲಯದ ನವರಂಗದಲ್ಲಿ ತೆರೆದ ಬಾವಿ ಛತ್ತಿನಲ್ಲಿ ಸೂರ್ಯದೇವನ ವಿಗ್ರಹ ನೋಡಲು ಈಗಲೂ ಕಾಣಸಿಗುತ್ತದೆ. ಇಲ್ಲಿನ ಕಾಳಿಕಾ ದೇವಿ ಮಂದಿರ ಅಪರೂಪದಿಂದ ಕೂಡಿದೆ. ಜತೆಗೆ ಜೈನ ಶೈವ ಧಾರ್ಮಿಕ ಕೇಂದ್ರವಾದ ಮಿರಿಯಾಣ, ಸುಲೇಪೇಟ್​, ದೇಗಲಮಡಿ, ಚಿಂಚೋಳಿ ಸ್ಮಾರಕಗಳು, ಸೋಮಲಿಂಗದಳ್ಳಿಯಲ್ಲಿ ಅನಾಥವಾಗಿ ಒಂದೇ ಕಡೆ ಹತ್ತಾರು ಸಂಖ್ಯೆಯಲ್ಲಿ ಬಿದ್ದಿರುವ ವೀರಗಲ್ಲು ಹಾಗೂ ಮಾಸ್ತಿಗಲ್ಲುಗಳು ಬಗ್ಗೆ ಸಂಶೋಧನೆ ನಡೆಯಬೇಕಿದೆ ಎಂದರು.
ಕಲಬುರಗಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಡಾ.ಶಾಮಲಾ ಮ್ಯಾಕಲ್​ ಮಾತನಾಡಿ, ಯಾವುದೇ ಚರಿತ್ರೆ ಪುಸ್ತಕಕ್ಕೆ ಕಾಲಮಾನದ ಚೌಕಟ್ಟಿರಬೇಕು. ಅದರಾಚೆಗಿನ ಅಧ್ಯಯನಗಳಿಗೆ ಭೌಗೋಳಿಕ ವ್ಯಾಪ್ತಿ ಸಿಗಬಹುದೇ ಹೊರತು ಐತಿಹಾಸಿಕ ವ್ಯಾಪ್ತಿ ಸಿಗುವುದಿಲ್ಲ. ಚಿಂಚೋಳಿ ತಾಲೂಕು ದರ್ಶನ ಮಹತ್ವದ ಕೃತಿ. ಭವಿಷ್ಯದಲ್ಲಿ ಸಂಶೋಧಕರಿಗೆ ಆಕರ ಗ್ರಂಥವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೃತಿ ಕುರಿತು ಪರಿಚಯಿಸಿದ ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗೆಜೆಟಿಯರ್​ ಇಲಾಖೆ ಉಪ ನಿರ್ದೇಶಕ ಡಾ.ವೀರಶೆಟ್ಟಿ ಗಾರಂಪಳ್ಳಿ, ಚಿಂಚೋಳಿ ತಾಲೂಕು ಚಾರಿತ್ರಿಕವಾಗಿ ಮಹತ್ವದ ತಾಣ. ಇಲ್ಲಿ ರಾಮಾಯಣ ಸೇರಿ ಬೌದ್ಧ, ಜೈನ, ಶೈವ ಹಾಗೂ ಮಧ್ಯಯುಗದ ಇಸ್ಲಾಂ ಆಳ್ವಿಕೆ ಕಾಲದ ಸಾಕಷ್ಟು ಕುರುಹುಗಳು ಲಭ್ಯ ಇವೆ. ಈ ಕುರಿತು ಇನ್ನಷ್ಟು ಅಧ್ಯಯನ ನಡೆಯಬೇಕು. ಕೊಳ್ಳೂರಿನಲ್ಲಿ ಈಗಲೂ ನಾಗದೇವತೆ ಹಾಗೂ ತಾರಾ ಭಗವತಿಯ ಶಿಲ್ಪ ಕಾಣಬಹುದು. ಅವು ತಾಲೂಕಿನ ಬೌದ್ಧ ಸಂಸತಿ ಬಿಂಬಿಸುತ್ತವೆ ಎಂದರು.
ಪುಸ್ತಕ ಲೇಖಕಿ ಡಾ.ದಿವ್ಯಾ ಕೆ.ವಾಡಿ, ಡಾ.ರಾಮಕೃಷ್ಣ ಮಾತನಾಡಿ, ಕೃತಿ ರಚನೆಗೆ ಪಟ್ಟ ಕಷ್ಟ ನನೆದು ಕಣ್ಣೀರು ಹಾಕಿದರು. ಕಾಲೇಜು ಪ್ರಾಂಶುಪಾಲ ಪ್ರೊ.ಮಾಣಿಕಮ್ಮ ಸುಲ್ತಾನಪುರ ಅಧ್ಯತೆ ವಹಿಸಿದ್ದರು. ಡಾ.ಬಸವರಾಜ ಭಾಗಾ, ಡಾ.ನಮೋಶಿ ರಾಠೋಡ್​, ಡಾ.ಮೀನಾ ರಾಠೋಡ್​, ಬಸವರಾಜ ಐನೋಳ್ಳಿ, ಮೆರಾಜ್​ ಪಾಶಾ ಹಸನಲ್ಲಿ, ಚೇತನ್​ ಅಣವಾರ ಇತರರಿದ್ದರು. ಸುನಿತಾ ಮಾಡಗಿ ನಿರೂಪಣೆ ಮಾಡಿದರು. ಕಾಶಿನಾಥ ಹುಣಜೆ ಸ್ವಾಗತಿಸಿದರು. ಅಂಬರೀಶ್​ ಪವಾರ್​ ವಂದಿಸಿದರು.
"

ಚಿಂಚೋಳಿ ತಾಲೂಕು ಐತಿಹಾಸಿಕ ಮತ್ತು ಸಾಂಸತಿಕವಾಗಿ ತನ್ನದೇ ಆದ ಹಿರಿಮೆ ಹೊಂದಿದೆ. ಇದನ್ನು ನಿಖರ ದತ್ತಾಂಶಗಳೊಂದಿಗೆ ಪುಸ್ತಕ ರಚಿಸಿದ ಲೇಖಕರ ಶ್ರಮ ಮತ್ತು ಸಾಂಸತಿಕ ಕಾಳಜಿ ಅನನ್ಯ.

— > ಮಲ್ಲಿಕಾರ್ಜುನ ಪಾಲಮೂರ ಪ್ರಾಂಶುಪಾಲ, ಸರ್ಕಾರಿ ಪಿಯು ಕಾಲೇಜು ಚಿಂಚೋಳಿ