High court 
ರಾಜ್ಯ

ಪಾಲಕರ ಜಗಳದಲ್ಲಿ ಮಕ್ಕಳು ಬಲಿಪಶು ಆಗಬಾರದು| High court

ಪ್ರಮುಖ ಮುಖ್ಯಾಂಶಗಳು

  • ವಯಸ್ಕ ಮಗನ ಮೇಲಿದ್ದ ವಿದೇಶ ಪ್ರಯಾಣ ನಿರ್ಬಂಧ ತೆರವು
ಬೆಂಗಳೂರು: ತಂದೆ ಮತ್ತು ತಾಯಿಯ ಕೌಟುಂಬಿಕ ವಿವಾದಗಳ ಕಾರಣಕ್ಕೆ ವಯಸ್ಕ ಮಕ್ಕಳ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಹೇಳಿದೆ.
ತನ್ನ ವಿದೇಶ ಪ್ರವಾಸಕ್ಕೆ ನಿರ್ಬಂಧ ಹೊರಿಸಿ ತಾನು ಅಪ್ರಾಪ್ತನಾಗಿದ್ದಾಗ 2006ರಲ್ಲಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರಿನ 32 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಪಾಲಕರ ಕಿತ್ತಾಟದ ಕಾರಣ ಮಕ್ಕಳು ಬಲಿಪಶುಗಳಾಗುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2006ರಲ್ಲಿ ಅರ್ಜಿದಾರರ ತಂದೆ ಮತ್ತು ತಾಯಿ ನಡುವೆ ನಡೆದಿದ್ದ ಕೌಟುಂಬಿಕ ಕಲಹದ ಸಂದರ್ಭದಲ್ಲಿ ಮಕ್ಕಳನ್ನು ವಿದೇಶಕ್ಕೆ ಕರೆದೊಯ್ಯದಂತೆ ಫ್ಯಾಮಿಲಿ ಕೋರ್ಟ್​ ನಿರ್ಬಂಧ ವಿಧಿಸಿತ್ತು. ಈ ಆದೇಶದ ಆಧಾರದ ಮೇಲೆ ಬ್ಯೂರೋ ಆಫ್​ ಇಮಿಗ್ರೇಷನ್​ ಲುಕ್​ ಔಟ್​ ಸುತ್ತೋಲೆ ಹೊರಡಿಸಿತ್ತು. ಕಾಲಕ್ರಮೇಣ ಅರ್ಜಿದಾರರು ವಯಸ್ಕರಾದರೂ, ಆ ಸುತ್ತೋಲೆ ಮಾತ್ರ ಹಾಗೆಯೇ ಮುಂದುವರಿದಿತ್ತು. 2023ರಲ್ಲಿ ಅವರು ವಿದೇಶಕ್ಕೆ ಪ್ರಯಾಣಿಸಲು ಮುಂದಾದಾಗ, ಈ ಹಳೆಯ ಆದೇಶದ ಅಡಿಯಲ್ಲಿ ತಡೆಯೊಡ್ಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.

ವಯಸ್ಕರಿಗೆ ಅನ್ವಯವಿಲ್ಲ:

ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರು ಪ್ರಸ್ತುತ ವಯಸ್ಕರಾಗಿದ್ದಾರೆ. ವಯಸ್ಕ ವ್ಯಕ್ತಿಯು ತಂದೆ-ತಾಯಿಯ ವೈವಾಹಿಕ ವ್ಯಾಜ್ಯದ ಭಾಗವಾಗಲು ಸಾಧ್ಯವಿಲ್ಲ. ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬ ವ್ಯಕ್ತಿಗೂ ವಿದೇಶಕ್ಕೆ ಸಂಚರಿಸುವ ಮೂಲಭೂತ ಹಕ್ಕಿದೆ. ಪಾಲಕರ ಹಳೆಯ ಕೌಟುಂಬಿಕ ಕಲಹದ ನೆಪವೊಡ್ಡಿ ಈ ಹಕ್ಕನ್ನು ದೀರ್ಘಕಾಲ ಹತ್ತಿಕ್ಕುವುದು ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟಿದೆ.
ℹ️

ಅಧಿಕಾರಿಗಳ ವೈಲ್ಯ 

2023ರ ಅಕ್ಟೋಬರ್​ನಲ್ಲಿಯೇ ಫ್ಯಾಮಿಲಿ ಕೋರ್ಟ್​ ಈ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದರೂ, ಇಮಿಗ್ರೇಷನ್​ ಅಧಿಕಾರಿಗಳು ಲುಕ್​ ಔಟ್​ ಸುತ್ತೋಲೆಯನ್ನು ಹಿಂಪಡೆಯುವಲ್ಲಿ ರ್ನಿಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿದಾರರ ಮೇಲಿರುವ ನಿರ್ಬಂಧವನ್ನು ಶೀಘ್ರ ತೆಗೆದುಹಾಕಲು ಸೂಚಿಸಿದೆ.