ಶಹಾಪುರ ತಾಲೂಕಿನ ಭೀ.ಗುಡಿಯ ದಿಗ್ವಿಜಯ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಉದ್ಘಾಟಿಸಿದರು. ಉಪಸಭಾಪತಿ ರುದ್ರಪ್ಪ ಲಮಾಣಿ, ಶರಣು ಗದ್ದುಗೆ ಇತರರಿದ್ದರು.
- ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಅಭಿಮತ
- ದಿಗ್ವಿಜಯ ಶಾಲೆ ಉದ್ಘಾಟನೆ
ಶಹಾಪುರ: ಮಕ್ಕಳು ಸಮಾಜಕ್ಕೆ ಕೊಡುವವರಾಗಬೇಕು, ದಾನಿಯಾಗುವ ಮನೋಭಾವ ಬೆಳೆಸಿಕೊಳ್ಳಬೇಕು, ಆಕಾಶದಲ್ಲಿ ಹಾರುವ ಹಕ್ಕಿಗಳಂತೆ ಸ್ವತಂತ್ರವಾಗಿ, ಆತ್ಮವಿಶ್ವಾಸದಿಂದ ಬದುಕಲು ಮಕ್ಕಳಿಗೆ ಪಾಲಕರು ಮತ್ತು ಶಿಕ್ಷಕರು ಅಲ್ಲದೆ ಶಾಲಾ ಆಡಳಿತ ಮಂಡಳಿಯವರು ಅವಕಾಶ ಕಲ್ಪಿಸಬೇಕು ಎಂದು ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ಸಮೀಪದ ಭೀ.ಗುಡಿ ಬಳಿ ಗುರುವಾರ ಹಮ್ಮಿಕೊಂಡಿದ್ದ ದಿಗ್ವಿಜಯ ಇಂಟರ್ ನ್ಯಾಷನಲ್ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಪ್ರೀತಿ ಮತ್ತು ಶಿಸ್ತು ಎರಡೂ ಅಗತ್ಯ. ಶಿಕ್ಷಕರು ಮಕ್ಕಳನ್ನು ತಿದ್ದಿದಾಗ ಪಾಲಕರು ಪ್ರಶ್ನಿಸುವ ಬದಲು ಸಹಕರಿಸಬೇಕು. ಆಗ ಮಾತ್ರ ವಿದ್ಯೆಯ ಜತೆಗೆ ಸಂಸ್ಕಾರ ಬೆಳೆಯುತ್ತದೆ ಎಂದು ತಿಳಿಸಿದರು.
ಉಪ ಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಶಹಾಪುರ ತಾಲೂಕಿನ ಹರಿಲಾಲ್ ರಾಠೊಡ್ ಎನ್ನುವ ಯುವಕ ಚಹಾ ವ್ಯಾಪಾರ ಮಾಡಿಯೇ ಇಂತಹ ಶಿಕ್ಷಣ ಸಂಸ್ಥೆ ಕಟ್ಟಿರೋದು ಅತ್ಯಂತ ಬಹಳ ಖುಷಿಯ ವಿಚಾರ ಎಂದರು. ಪಾಲಕರು ಸಂಸ್ಥೆಗೆ ಉತ್ತಮ ಸಹಕಾರ ನೀಡಬೇಕು. ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಸಂಸ್ಥೆ ಆಡಳಿತಮಂಡಳಿ ಹೆಚ್ಚು ಹೆಚ್ಚು ಪ್ರಯತ್ನ ಹಾಕಬೇಕು ಎಂದರು.
ಉಕ ಕರವೇ ಅಧ್ಯಕ್ಷ ಶರಣುಗದ್ದುಗೆ ,ವಿಜಯ ಜಾಧವ ಮಾತನಾಡಿದರು. ಪೂಜ್ಯರಾದ ಬಳಿರಾಮ ಮಹಾರಾಜ, ವರದಾನಂದೇಶ್ವರ ಸ್ವಾಮಿಗಳು, ಶಿವಲಿಂಗೇಶ್ವರ ಸ್ವಾಮಿಗಳು, ವಿಠ್ಠಲ ಮಹಾರಾಜರು, ತೇಜುಸಿಂಗ್ ಬೋನುನಾಯಕ ಮಹಾರಾಜರು, ಡಾ.ಜ್ಯೋತಿ, ಡಿಡಿಪಿಐ ಚನ್ನಬಸಪ್ಪ ಮುಧೋಳ, ಬಿಇಒ ಹಣಮಂತ್ರಾಯ ಸೋಮಾಪುರ, ಬಸವರಾಜಪ್ಪಗೌಡ ತಂಗಡಗಿ, ನಾಗಪ್ಪ ಕಾಶೀರಾಜ, ಶಿವಮಹಾಂತಪ್ಪ ಸಾಹು, ಆರ್.ಚನ್ನಬಸ್ಸು ವನದುರ್ಗ, ಮಹಾರಾಜ ದಿಗ್ಗಿ, ಮಲ್ಲಿಕಾರ್ಜುನ ಪೂಜಾರಿ, ಮಲ್ಲಪ್ಪ ಉಳಂಡಗೇರಿ ಸೇರಿದಂತೆಯೇ ಇತರರಿದ್ದರು. ಇದಕ್ಕೂ ಮುಂಚೆ ಸಚಿವ ಶರಣಬಸಪ್ಪ ದರ್ಶನಾಪುರ ಕಟ್ಟಡವನ್ನು ಉದ್ಘಾಟಿಸಿ ಸಂಸ್ಥೆಯವರಿಗೆ ಶುಭಹಾರೈಸಿದರು.
ಸಂಗೀತ ಕಲಾವಿದರಾದ ಹನುಮಂತ ಲಮಾಣಿ ಹಾಗೂ ರಮೇಶ ಲಮಾಣಿ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಆಡಳಿತಾಧಿಕಾರಿ ರೇಖು ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹರಿಲಾಲ್ ದಂಪತಿಗಳಿಗೆ ಸನ್ಮಾನಿಸಲಾಯಿತು.