ಬೆಂಗಳೂರು: ಕಳೆದ 2 ವರ್ಷಗಳಲ್ಲಿ ರಾಜ್ಯದಲ್ಲಿ ಮಕ್ಕಳಲ್ಲಿ ಕಾಡುತ್ತಿದ್ದ ‘ತೀವ್ರ ತೀವ್ರತರ ಅಪೌಷ್ಟಿಕತೆ’ (ಎಸ್‌ಎಎಂ) ಕೇಸ್‌ಗಳು ಶೇ.91 ಇಳಿಕೆಯಾಗಿದೆ. ಕೇಂದ್ರ ಸರ್ಕಾರದ ಪೋಷಣ್ ಟ್ರ್ಯಾಕರ್ ದತ್ತಾಂಶದ ಪ್ರಕಾರ ರಾಜ್ಯದಲ್ಲಿ ಅಪೌಷ್ಟಿಕತೆಯ ಸೂಚ್ಯಂಕಗಳು ಗಣನೀಯವಾಗಿ ಸುಧಾರಿಸಿವೆ.
2023-24ನೇ ಸಾಲಿನಲ್ಲಿ ಪೋಷಣ್ ಟ್ರ್ಯಾಕರ್ ವ್ಯಾಪ್ತಿಗೆ ಒಳಪಟ್ಟ ಮಕ್ಕಳ ಪೈಕಿ 77,482 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಆದರೆ, 2025-26ರಲ್ಲಿ ಇದರ ಸಂಖ್ಯೆ 6,725ಕ್ಕೆ ಕುಸಿದಿದೆ. 2 ವರ್ಷದಲ್ಲಿ ಅಪೌಷ್ಟಿಕತೆಯ ಪ್ರಮಾಣ ಶೇ.91 ತಗ್ಗಿದೆ.ಮಧ್ಯಮ ಪ್ರಮಾಣದ ಅಪೌಷ್ಟಿಕತೆ ಹೊಂದಿದ್ದ ಮಕ್ಕಳ ಸಂಖ್ಯೆಯೂ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ.
2023-24ರಲ್ಲಿ 1.55 ಲಕ್ಷ ಇದ್ದ ಪ್ರಕರಣಗಳು 2025-26ರಲ್ಲಿ 72 ಸಾವಿರಕ್ಕೆ ಇಳಿಕೆಯಾಗಿದೆ. ತೀವ್ರ ಕುಬ್ಜತೆಯು ಶೇ.21ನಿಂದ ಶೇ. 12.57ಕ್ಕೆ ಇಳಿಕೆಯಾಗಿದೆ. ಮಧ್ಯಮ ಕುಬ್ಜತೆಯು ಶೇ. 20.10ನಿಂದ ಶೇ. 16.36 ಕ್ಕೆ ತಗ್ಗಿದೆ. ತೀವ್ರ ಕಡಿಮೆ ತೂಕ ಹೊಂದಿರುವ ಮಕ್ಕಳ ಪ್ರಮಾಣ ಶೇ. 4.24 ರಿಂದ ಶೇ. 2.11 ಕ್ಕೆ ಹಾಗೂ ಮಧ್ಯಮ ಕಡಿಮೆ ತೂಕ ಹೊಂದಿರುವ ಮಕ್ಕಳ ಪ್ರಮಾಣ ಶೇ. 16 ರಿಂದ ಶೇ. 11.53 ಕ್ಕೆ ಕುಸಿದಿದೆ.
ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ನಿಯಮಿತವಾಗಿ ಪೂರಕ ಪೌಷ್ಟಿಕ ಆಹಾರ ತಲುಪಿಸಲಾಗುತ್ತಿದೆ. ಪೋಷಣ್ ಟ್ರ್ಯಾಕರ್ ಅಪ್ಲಿಕೇಶನ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಎತ್ತರ, ತೂಕವನ್ನು ನಿಯಮಿತವಾಗಿ ಡಿಜಿಟಲ್ ರೂಪದಲ್ಲಿ ದಾಖಲಿಸಿ ಅಪೌಷ್ಟಿಕತೆ ಹೊಂದಿರುವ ಮಕ್ಕಳನ್ನು ಆರಂಭಿಕ ಹಂತದಲ್ಲೇ ಗುರುತಿಸಲಾಗುತ್ತಿದೆ. ಹೆಚ್ಚು ಅಪೌಷ್ಟಿಕತೆ ಹೊಂದಿರುವ ಮಕ್ಕಳನ್ನು ಗುರುತಿಸಿ ತಕ್ಷಣವೇ ‘ಪೌಷ್ಟಿಕಾಂಶ ಪುನಶ್ಚೇತನ ಕೇಂದ್ರಗಳಿಗೆ’ ರವಾನಿಸಿ ವಿಶೇಷ ವೈದ್ಯಕೀಯ ಉಪಚಾರ, ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಪೌಷ್ಟಿಕತೆಯ ಸೂಚ್ಯಂಕ ಇಳಿಮುಖವಾಗಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು.
ಅಂಗನವಾಡಿ ಕಾರ್ಯಕರ್ತೆಯರ ಕಾರ್ಯವೈಖರಿ, ಪೌಷ್ಟಿಕಾಹಾರ ಯೋಜನೆಯಿಂದ ತೀವ್ರತರ ಅಪೌಷ್ಟಿಕತೆ ತಡೆಗಟ್ಟಲು ಸಾಧ್ಯವಾಗಿದ್ದರೂ ‘ಕುಬ್ಜತೆ’ ನಿಯಂತ್ರಣ ಇನ್ನೂ ಸುದೀರ್ಘ ಸವಾಲಾಗಿ ಉಳಿದಿದೆ. ಕುಬ್ಜತೆಯು ಸುದೀರ್ಘ ಅವಧಿಯ ಅಪೌಷ್ಟಿಕತೆಯನ್ನು ಪ್ರತಿನಿಧಿಸುವುದರಿಂದ ಅದನ್ನು ಹತೋಟಿಗೆ ತರಲು ಇನ್ನಷ್ಟು ಪ್ರಯತ್ನ ಅಗತ್ಯವಿದೆ. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಮತ್ತು ಸುಸ್ಥಿರ ಆರೋಗ್ಯ ವ್ಯವಸ್ಥೆ ನಿರ್ಮಿಸಲು ನಿರಂತರ ಶುಚಿತ್ವ, ಆರೋಗ್ಯ ತಪಾಸಣೆ ಮತ್ತು ಉತ್ತಮ ಪೌಷ್ಟಿಕಾ ಆಹಾರ ವಿತರಣೆ ಕಾಯ್ದುಕೊಳ್ಳುವುದು ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.