ರಾಜ್ಯ

ಮಕ್ಕಳ ಸಹಾಯವಾಣಿ ಸಿಬ್ಬಂದಿಗೆ ಬೇಕಿದೆ ಸಹಾಯ! 9 ತಿಂಗಳಿಂದ ವೇತನವಿಲ್ಲದೆ ಗೋಳಾಟ ಉದ್ಯೋಗ ಭದ್ರತೆ

| ಕೆ.ಎಂ.ಪಂಕಜ, ಬೆಂಗಳೂರು

ಮಕ್ಕಳ ಮೇಲಿನ ದೌರ್ಜನ್ಯ, ನಿರ್ಲಕ್ಷ್ಯ ಹಾಗೂ ವಿವಿಧ ಸಂಕಷ್ಟದ ಸಂದರ್ಭಗಳಲ್ಲಿ ನೆರವಿಗೆ ಧಾವಿಸುವ ‘ಮಕ್ಕಳ ಸಹಾಯವಾಣಿ’ಯಲ್ಲಿ ಕೆಲಸ ಮಾಡುವ ಸಿಬ್ಬಂದಿ ದಿನದ 24 ಗಂಟೆಯೂ ಸೇವೆಗೆ ಸಿದ್ಧರಿರಬೇಕಾಗುತ್ತದೆ. ಆದರೆ, ಇಂತಹ ಜವಾಬ್ದಾರಿಯುತ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಸಮರ್ಪಕ ವೇತನ ಹಾಗೂ ಉದ್ಯೋಗ ಭದ್ರತೆಯೇ ಇಲ್ಲವಾಗಿದೆ. ಕೊಡುವ ಕನಿಷ್ಠ ವೇತನ 9 ತಿಂಗಳಿಂದ ಬಂದೇ ಇಲ್ಲ. ಈ ಬಗ್ಗೆ ಸಹಾಯವಾಣಿ ಸಿಬ್ಬಂದಿ ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ.

ಸಮಸ್ಯೆಗಳಲ್ಲಿ ಸಿಲುಕಿರುವ ಮಕ್ಕಳಿಗೆ ನೆರವು, ರಕ್ಷಣೆ ಮತ್ತು ಅಗತ್ಯ ಬೆಂಬಲ ಒದಗಿಸುವ ಮಹತ್ವದ ಜವಾಬ್ದಾರಿ ಹೊತ್ತಿರುವ 1098 ಚೈಲ್ಡ್ ಹೆಲ್ಪ್ಲೈನ್ ಸಿಬ್ಬಂದಿ ಬದುಕಿಗೇ ಈಗ ರಕ್ಷಣೆ ಇಲ್ಲದಂತಾಗಿದೆ. ಕಳೆದ ಒಂಬತ್ತು ತಿಂಗಳಿಂದ ಅವರಿಗೆ ವೇತನ ಪಾವತಿಯಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಅಲ್ಪ ವೇತನದಲ್ಲೇ ನಿರಂತರ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಉದ್ಯೋಗ ಭದ್ರತೆಯೂ ಇಲ್ಲದೆ ತೀವ್ರ ಆರ್ಥಿಕ ಮತ್ತು ಮಾನಸಿಕ ಒತ್ತಡ ಎದುರಿಸುವಂತಾಗಿದೆ.

ಸಿಬ್ಬಂದಿಗೆ ತಿಂಗಳಿಗೆ ಸುಮಾರು 13 ಸಾವಿರ ರೂ. ವೇತನ ನೀಡಲಾಗುತ್ತಿದೆ. ಆದರೆ ಒಂಬತ್ತು ತಿಂಗಳಿಂದ ಈ ವೇತನವೂ ಬಾಕಿ ಉಳಿದಿದೆ ಎಂಬ ಆರೋಪವಿದೆ. ಇದರಿಂದ ಕುಟುಂಬ ನಿರ್ವಹಣೆ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಹಾಗೂ ದೈನಂದಿನ ಅಗತ್ಯ ಪೂರೈಸಲು ಸಿಬ್ಬಂದಿ ಪರದಾಡುವಂತಾಗಿದೆ. ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ, ಜೀವನ ನಿರ್ವಹಣೆಗೆ ಅಗತ್ಯವಾದ ವೇತನವೇ ಸಕಾಲದಲ್ಲಿ ದೊರೆಯದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ.

ಮಧ್ಯಪ್ರವೇಶಕ್ಕೆ ಆಗ್ರಹ

ತಕ್ಷಣ ಬಾಕಿ ವೇತನ ಬಿಡುಗಡೆ, ವೇತನ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ವೇತನ ರಚನೆ ಮರುಪರಿಶೀಲಿಸಿ, ಕೆಲಸದ ಸ್ವರೂಪ ಮತ್ತು ಜವಾಬ್ದಾರಿಗೆ ಅನುಗುಣವಾಗಿ ನ್ಯಾಯಯುತ ವೇತನ ನಿಗದಿಪಡಿಸಬೇಕು ಎಂಬುದು ಸಿಬ್ಬಂದಿಯ ಪ್ರಮುಖ ಬೇಡಿಕೆಯಾಗಿದೆ. ಇದರೊಂದಿಗೆ, ಉದ್ಯೋಗ ಭದ್ರತೆ, ಸೇವಾ ಖಾಯಮಾತಿ, ಕೆಲಸದ ಅವಧಿ ನ್ಯಾಯಯುತವಾಗಿ ರೂಪಿಸುವುದು, ಅಗತ್ಯ ಸಿಬ್ಬಂದಿ ನೇಮಿಸುವುದು ಹಾಗೂ ವೇತನ ವಿಳಂಬದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಸಿಬ್ಬಂದಿಯ ಕುಂದುಕೊರತೆ ಪರಿಹರಿಸಬೇಕು ಎಂದು ಆಗ್ರಹಿಸಲಾಗಿದೆ.

24 ಗಂಟೆ ಸೇವೆ, ಭವಿಷ್ಯ ಆತಂಕ

ಮಕ್ಕಳ ರಕ್ಷಣೆಯ ಕಾರ್ಯದಲ್ಲಿ ಸಮಯದ ಮಿತಿಯಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಬೇಕಾದ ಅನಿವಾರ್ಯತೆಯೂ ಇದೆ. ಇಂತಹ ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನ್ಯಾಯಯುತ ಕೆಲಸದ ಅವಧಿ, ಸಾಕಷ್ಟು ಸಿಬ್ಬಂದಿ ಬಲ ಹಾಗೂ ಸೂಕ್ತ ಕೆಲಸದ ಪರಿಸ್ಥಿತಿ ಕಲ್ಪಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದರೂ ಉದ್ಯೋಗ ಭದ್ರತೆ ಬಗ್ಗೆ ಅನಿಶ್ಚಿತತೆ ಕಾಡುತ್ತಿದೆ. ಅರ್ಹತೆ ಮತ್ತು ಅನ್ವಯವಾಗುವ ನಿಯಮಗಳ ಆಧಾರದಲ್ಲಿ ಸೇವೆ ಕಾಯಂಗೊಳಿಸುವ ಅಥವಾ ಸೂಕ್ತ ಉದ್ಯೋಗ ಭದ್ರತೆ ಒದಗಿಸುವ ಕುರಿತು ಸರ್ಕಾರ ನ್ಯಾಯಯುತವಾಗಿ ಪರಿಗಣಿಸಬೇಕು ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.