ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಚಿಕ್ಕಸಂಗಮ ಪ್ರದೇಶದಲ್ಲಿ 160 ಎಕರೆ ಪ್ರದೇಶದಲ್ಲಿ ಬೃಹತ್ ಸಸಿ ನೆಡುವ ಕಾರ್ಯಕ್ಕೆ ಶನಿವಾರ ಶಾಸಕ ಜೆ.ಟಿ. ಪಾಟೀಲ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಸಂಗಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಲ್ ಅಹಿರೇ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಗೊರವರ ಮತ್ತಿತರರು ಇದ್ದರು. 
ರಾಜ್ಯ

ಚಿಕ್ಕಸಂಗಮ ಪ್ರದೇಶ ಪರಿಸರ ಸ್ನೇಹಿ ತಾಣದ ಗುರಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜೆ.ಟಿ. ಪಾಟೀಲ ಹೇಳಿಕೆ
  • 160 ಎಕರೆ ಪ್ರದೇಶದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ
ಬಾಗಲಕೋಟೆ: ಬೀಳಗಿ ತಾಲೂಕಿನ ಚಿಕ್ಕಸಂಗಮ ಪ್ರದೇಶವನ್ನು ಪರಿಸರ ಸ್ನೇಹಿ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದೆಂದು ಶಾಸಕ ಜೆ.ಟಿ. ಪಾಟೀಲ ತಿಳಿಸಿದರು.
ಬೀಳಗಿ ತಾಲೂಕಿನ ಐತಿಹಾಸಿಕ ತಾಣ ಚಿಕ್ಕಸಂಗಮ ಸಮಗ್ರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಮೊದಲ ಹಂತವಾಗಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ 160 ಎಕರೆ ಪರಿಸರ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಸಸಿ ನೆಡುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಈ ಭಾಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಸಾಕಷ್ಟು ಸಸಿಗಳನ್ನು ನೆಟ್ಟು ಪ್ರವಾಸಿಗರಿಗೆ ಆಕರ್ಷಕ ನೆರಳಿನಿಂದ ಕೂಡಿದ ಪರಿಸರ ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಚಿಕ್ಕಸಂಗಮ ತಾಣದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಜೊತೆಗೆ ಪರಿಸರ ಸಂರಕ್ಷಣೆಯನ್ನು ಸಮಾನವಾಗಿ ಗಮನಿಸಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಯೊಂದಿಗೆ ಪರಿಸರ ಸಮತೋಲನ ಕಾಪಾಡುವುದು ಅಗತ್ಯವಾಗಿದೆ.
ಹೀಗಾಗಿ ಚಿಕ್ಕಸಂಗಮವನ್ನು ಹಸಿರು ತಾಣವನ್ನಾಗಿ ರೂಪಿಸಲು 160 ಎಕರೆ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗಿದೆ. ಈ ಭಾಗದಲ್ಲಿ 160 ಪ್ರಭೇದಗಳ ವಲಸೆ ಪಕ್ಷಿಗಳು ಕೂಡಾ ಬರುತ್ತಿದ್ದು, ಅವುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಣ್ಣುಗಳ ಗಿಡಗಳನ್ನು ನೆಡಲು ತಿಳಿಸಿದರು.
ಸಾರ್ವಜನಿಕರು ಕೂಡಾ ಸಸಿಗಳ ಸಂರಕ್ಷಣೆಯಲ್ಲಿ ಕೈಜೋಡಿಸಲು ಮನವಿ ಮಾಡಿದರು. ಪರಿಸರ ಸಂರಕ್ಷಣೆಗೆ ಆಹಾರ ಇಲಾಖೆಯಿಂದ 10 ಲಕ್ಷ ರೂ. ಗಳ ಅನುದಾನ ನೀಡಲು ಸ್ಥಳದಲ್ಲಿದ್ದ ಜಂಟಿ ಆಹಾರ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಅವರಿಗೆ ತಿಳಿಸಿದರು.
ಬೀಳಗಿ ಮತಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗಿದ್ದು, 25 ಕೋಟಿ ರೂ. ಗಳ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಮಾಡಲಾಗಿದೆ. ಚಿಕ್ಕಸಂಗಮದಿಂದ ಆಲಮಟ್ಟಿವರೆಗೆ ಬೋಟಿಂಗ್ ವ್ಯವಸ್ಥೆ, ಜಲ ಕ್ರೀಡೆಗಳು ಹಾಗೂ ಹೆರಕಲ್ ಭಾಗದಲ್ಲಿ ಪಿಪಿ ಮಾದರಿಯಲ್ಲಿ ಜಂಗಲ್ ರೆಸಾಲ್ಟ್ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಲ್ ಅಹಿರೇ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ, ಬೀಳಗಿ ತಹಸೀಲ್ದಾರ ವಿನೋದ ಹತ್ತಳ್ಳಿ, ಆರ್‌ಎ್ಒಗಳಾದ ಅಮತ ಗಂಡೋಶಿ, ರಾಜೇಶ ಪಾಟೀಲ, ಬಿ.ಜಿ. ಕಮತರ, ಅಶೋಕ ರಾಠೋಡ, ಎಸಿಎ್ಗಳಾದ ಸೆಲಬರಾಜ ನಾಯ್ಕರ, ಪ್ರದೀಪ ರಾಠೋಡ, ಹಾಗೂ ಸ್ಥಳೀಯರಾದ ಹನಮಂತ ಕಾಖಂಡಕಿ, ಶ್ರೀಶೈಲ ಸೂಳಿಕೇರಿ, ಯಮನಪ್ಪ ರೊಳ್ಳಿ ಮತ್ತಿತರರು ಇದ್ದರು.
"

ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಚಿಕ್ಕಸಂಗಮ ದೇವಸ್ಥಾನಕ್ಕೆ ಪ್ರಾಧಿಕಾರದ ಅನುದಾನದಡಿ 1.50 ಕೋಟಿ ರೂ. ಗಳ ವೆಚ್ಚದಲ್ಲಿ ತೇರು ಹಾಗೂ ಮಂಗಳ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು.

ಜೆ.ಟಿ. ಪಾಟೀಲ ಶಾಸಕರು ಬೀಳಗಿ.