ಕನಕಪುರ ತಾಲೂಕು ಹೊನಗನಹಳ್ಳಿಯಲ್ಲಿ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮೇಕೆದಾಟು ಅನುಷ್ಠಾನಕ್ಕೆ ಒತ್ತಾಯಿಸಿದರು. ಶ್ರೆವತ್ಸ, ಎನ್.ಮಹೇಶ್, ಜಗನ್ನಾಥ್, ಮಮತ, ಆನಂದಸ್ವಾಮಿ ಇದ್ದರು.
ಕನಕಪುರ :ಮುಖ್ಯಮಂತ್ರಿಯವರೇ ನಿಮಗೆ ಗುದ್ದಲಿ ಸಿಗುತ್ತಿಲ್ಲವೇ? ಪೂಜಾ ಸಾಮಗ್ರಿ ಸಿಗುತ್ತಿಲ್ಲವೇ? ಮೇಕೆದಾಟು ಯೋಜನೆ ಪ್ರಾರಂಭಿಸಲು ನಿಮಗಿರುವ ಕೊರತೆ ಏನು, ಭಯ ಏನು? ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರಕ್ಕೆ ಪ್ರಶ್ನಿಸಿದರು.
ಸಾತನೂರು ಹೋಬಳಿ, ಹೊನ್ನಿಗನಹಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕರೋನಾ ಸಮಯದಲ್ಲಿ ರಾಜಕೀಯ ಸ್ವಾರ್ಥಕ್ಕೆ ನಮ್ಮ ನೀರು ನಮ್ಮ ಹಕ್ಕು ಅಡಿ ದೊಡ್ಡ ಪಾದಯಾತ್ರೆ ಮಾಡಿ, ಅಂದು ಗುದ್ದಲಿ ಪೂಜೆ ಮಾಡಲು ಯಾರ ಅನುಮತಿಯೂ ಬೇಕಿಲ್ಲ, ನಮಗೆ ಪೆನ್ನು ಪೇಪರ್ ಕೊಡಿ, ಸಾಧನೆ ಮಾಡಿ ತೋರಿಸುತ್ತೇವೆ, ಮೇಕೆದಾಟು ಯೋಜನೆ ಅನುಷ್ಠಾನ ಮಾಡೇ ತೀರುತ್ತೇವೆ ಅಂದರು. ಆದರೆ ಅಧಿಕಾರಕ್ಕೆ ಬಂದ ನಂತರ ನೀವು ಮಾಡಿದ್ದೇನು? ಕಾಲಹರಣ ಮಾಡಿದ್ದೀರಿಎಂದು ಕುಟುಕಿದರು.
ಕಾವೇರಿ ನೀರು ಹೋರಾಟಕ್ಕೆ ಸಿದ್ಧ: ಮಳೆ ಅಭಾವದಿಂದ ಎಲ್ಲ ಜಲಾಶಯ ಬತ್ತಿಹೋಗಿವೆ. ತಮಿಳುನಾಡು ಕಾವೇರಿ ನೀರಿಗಾಗಿ ಯಾವಾಗಲೂ ಕ್ಯಾತೆ ತೆಗೆಯುತ್ತಿದೆ. ಸದ್ಯಕ್ಕೆ 10 ಟಿ.ಎಂ.ಸಿ ನೀರಿದ್ದು ಅದರಲ್ಲಿ 4 ಟಿ.ಎಂ.ಸಿ ಬಳಸುವಂತಿಲ್ಲ, ಉಳಿದ 6 ಟಿ.ಎಂ.ಸಿ ನೀರು ಕುಡಿಯಲು ಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತಿಲ್ಲ.
ನೀವು ನೀರು ಬಿಡುವುದೇ ಆದರೆ ನಾವು ಜು.31ಕ್ಕೆ ಮಂಡ್ಯ ರೈತರ ಪರವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ. ಮಂಡ್ಯ ರೈತರ ಪರ ನಮ್ಮ ನಿಲುವು ಶತಃಸಿದ್ದ ಎಂದರು.
ಮಾಜಿ ಸಚಿವ ಎನ್.ಮಹೇಶ್, ಮೈಸೂರು ಶಾಸಕ ಶ್ರೀವತ್ಸ, ಮಾಜಿ ಎಂ.ಎಲ್.ಸಿ ರಘು ಕೌಟಿಲ್ಯ, ಬಿಜೆಪಿ ವಕ್ತಾರ ಗೋಪಿನಾಥ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷ ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಮುತ್ತು, ಗ್ರಾಮಾಂತರ ತಾಲೂಕು ಅಧ್ಯಕ್ಷ ಕೆ.ಪಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಇದ್ದರು.