ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರಿಗೆ ಚೇತನ್ ವಿರುದ್ಧ ಕ್ರಮ ಹಾಗೂ ಗಡಿಪಾರು ಮಾಡುವಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ದೂರು ನೀಡಿದರು. ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಸು.ನರಸಿಂಹಮೂರ್ತಿ, ಕನ್ನಡಪರ ಸಂಘಟನೆಗಳ ಮುಖಂಡರಾದ ತ.ನ.ಪ್ರಭುದೇವ, ರಾಜಘಟ್ಟರವಿ, ಡಿ.ಪಿ.ಆಂಜನೇಯ, ಪ್ರಮೀಳಾ ಮಹದೇವ್, ಪರಮೇಶ್, ಚೌಡರಾಜ್, ರಮೇಶ್, ಜನಪರ ಮಂಜು, ಗುರು, ನವೀನ್, ಸೂರಿ, ಮಂಜು, ಮನು, ನಾಗಣ್ಣ ಮತ್ತಿತರರಿದ್ದರು.
ದೊಡ್ಡಬಳ್ಳಾಪುರ : ವರನಟ ಡಾ.ರಾಜಕುಮಾರ್ ವಿರುದ್ಧ ನಟ ಚೇತನ್ ಅಹಿಂಸಾ ನೀಡಿರುವ ಹೇಳಿಕೆ ಖಂಡಿಸಿ ನಗರದ ಡಿ.ಕ್ರಾಸ್ ವೃತ್ತದಲ್ಲಿ ತಾಲೂಕಿನ ರಾಜಕುಮಾರ್ ಸಂಘಟನೆ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದವು. ಅಲ್ಲದೆ ಪೊಲೀಸ್ ಠಾಣೆಗೆ ದೂರು ನೀಡಿ ಗಡಿಪಾರಿಗೆ ಒತ್ತಾಯ ಮಾಡಿದವು.
ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್ ಮಾತನಾಡಿ, ಕನ್ನಡ ಚಿತ್ರರಂಗ ಹಾಗೂ ಭಾಷೆಗೆ ಡಾ.ರಾಜಕುಮಾರ್ ಕೊಡುಗೆ ಅಪಾರ. ಆದರೆ, ರಾಜ್ಕುಮಾರ್ ಅವರ ಇತಿಹಾಸ ತಿಳಿಯದೆ ಅವರ ಸ್ಮಾರಕ ನಿಮಾರ್ಣಕ್ಕೆ ಏಕೆ 2.5 ಎಕರೆ ಜಾಗ ನೀಡಬೇಕು ಎಂದು ನಟ ಚೇತನ್ ಹೇಳಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಡು, ನುಡಿ, ಜಲದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ರಾಜಕುಮಾರ್ ಅಂದು ಗೋಕಾಕ್ ಚಳವಳಿಯಲ್ಲಿ ಭಾಗವಹಿಸದೆ ಇದ್ದರೆ ಇಂದು ಕರ್ನಾಟಕ ಹೊರ ರಾಜ್ಯದ ಪಾಲಾಗುತ್ತಿತ್ತು. ಅಂದು ಪರ ರಾಜ್ಯಗಳ ಚಿತ್ರಗಳು ವಿಜೃಂಭಿಸುತ್ತಿದ್ದವು. ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರಲಿಲ್ಲ. ರಾಜಕುಮಾರ್ ಹೋರಾಟದ ಫಲವಾಗಿ ಅವಕಾಶ ಲಭಿಸಿತು. ಚೇತನ್ ಅಹಿಂಸಾ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಈತನ ಗಡಿಪಾರು ಮಾಡುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.