HDD Wife Chennamma | ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ: ಮಾಜಿ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಗಣ್ಯರ ಸಂತಾಪ
ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಧರ್ಮಪತ್ನಿ (HDD Wife Chennamma) ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ತಾಯಿ ಶ್ರೀಮತಿ ಚೆನ್ನಮ್ಮ ದೇವೇಗೌಡ (85) ಅವರು ನಿಧನರಾಗಿರುವುದಕ್ಕೆ ರಾಜ್ಯದ ಪ್ರಮುಖ ರಾಜಕೀಯ ನಾಯಕರು ತೀವ್ರ ಕಂಬನಿ ಮಿಡಿದಿದ್ದಾರೆ.
ಸಿಎಂ ಡಿಕೆಶಿ ಸಂತಾಪ ಸೂಚನೆ
ಎಕ್ಸ್ನಲ್ಲಿ ಸಿಎಂ ಡಿಕೆಶಿ ಪೋಸ್ಟ್ ಮಾಡಿದ್ದು, ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ ದೇವೇಗೌಡರ ಧರ್ಮಪತ್ನಿ, ಮಾತೃ ಸ್ವರೂಪಿ ಶ್ರೀಮತಿ ಚೆನ್ನಮ್ಮ ಅವರು ನಿಧನರಾಗಿರುವ ವಿಷಯ ಅತೀವ ದುಃಖವನ್ನುಂಟು ಮಾಡಿದೆ. ಶ್ರೀಮತಿ ಚೆನ್ನಮ್ಮ ಅವರು ಅಪಾರ ದೈವಭಕ್ತೆಯಾಗಿದ್ದರು. ಅವರು ಆಸ್ಪತ್ರೆಯಿಂದ ಗುಣಮುಖರಾಗಿ ವಾಪಸ್ಸು ಬರುತ್ತಾರೆಂದು ಎಲ್ಲರೂ ನಂಬಿಕೆ ಇಟ್ಟುಕೊಂಡಿದ್ದೆವು. ಆದರೆ ಆ ನಂಬಿಕೆ ಸುಳ್ಳಾಗಿರುವುದಕ್ಕೆ ಬಹಳ ಬೇಸರವಾಗಿದೆ.
ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎನ್ನುತ್ತಾರೆ. ಅದರಂತೆ ಚೆನ್ನಮ್ಮನವರು ದೇವೇಗೌಡರ ಪ್ರತಿ ಯಶಸ್ಸಿನ ಹಿಂದೆ ಹಾಗೂ ರಾಜಕೀಯದ ಏಳು-ಬೀಳುಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಮನೆಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವ ಮೂಲಕ ಅವರು ಗೌಡರ ಬದುಕಿನ ನಿಜವಾದ ಶಕ್ತಿಯಾಗಿದ್ದರು. ಯಾವುದೇ ಪ್ರಚಾರ ಬಯಸದೆ ತೆರೆಮರೆಯಲ್ಲಿ ಇದ್ದರು. ಅವರ ಅಗಲಿಕೆ ಕುಟುಂಬಸ್ಥರಿಗೆ ಹಾಗೂ ಆಪ್ತರಿಗೆ ತುಂಬಲಾರದ ನಷ್ಟವಾಗಿದೆ.ಭಗವಂತ ಹಿರಿಯರ ಆತ್ಮಕ್ಕೆ ಚಿರಶಾಂತಿ ನೀಡಲಿ, ಕುಟುಂಬಸ್ಥರಿಗೆ, ಬಂಧು-ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇಡೀ ಕುಟುಂಬಕ್ಕೆ ಮಾತೃಶಕ್ತಿಯಾಗಿದ್ದ ತಾಯಿ: ಮಾಜಿ ಸಿಎಂ ಬಿಎಸ್ವೈ
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾಜಿ ಸಿಎಂ ಬಿಎಸ್ವೈ, ದೇವೆಗೌಡರ ಸುದೀರ್ಘ ರಾಜಕೀಯ ಜೀವನದ ಏಳು-ಬೀಳುಗಳಲ್ಲಿ ನಿರಂತರವಾಗಿ ಬೆಂಬಲವಾಗಿ ನಿಂತು, ಇಡೀ ಕುಟುಂಬಕ್ಕೆ ಮಾತೃಶಕ್ತಿಯಾಗಿದ್ದ ಸರಳ ಸಜ್ಜನಿಕೆಯ ತಾಯಿ ಚೆನ್ನಮ್ಮನವರ ಅಗಲಿಕೆ ಗೌಡರ ಇಡೀ ಕುಟುಂಬಕ್ಕೆ ದೊಡ್ಡ ನಷ್ಟವಾಗಿದೆ ಎಂದು ತೀವ್ರ ದುಃಖ ವ್ಯಕ್ತಪಡಿಸಿ, ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಚೆನ್ನಮ್ಮನವರು ಕಷ್ಟಗಳಿಗೆ ಕುಗ್ಗದ ಗಟ್ಟಿಗಿತ್ತಿ: ಮಾಜಿ ಸಿಎಂ ಸಿದ್ದರಾಮಯ್ಯ
ಜನತಾ ಪರಿವಾರದ ದಿನಗಳ ತಮ್ಮ ನಿಕಟ ಒಡನಾಟವನ್ನು ಸ್ಮರಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಚೆನ್ನಮ್ಮನವರು ಜೀವನದ ಕಷ್ಟ-ನೋವುಗಳಿಂದ ಕುಗ್ಗದೆ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿ. ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಯಾವ ಹಮ್ಮು-ಬಿಮ್ಮು ಇಲ್ಲದೆ ಎಲ್ಲರನ್ನೂ ಅಕ್ಕರೆಯಿಂದ ಕಾಣುತ್ತಿದ್ದ ಆದರ್ಶ ಗೃಹಿಣಿಯಾಗಿ ತುಂಬು ಜೀವನ ಸಾಗಿಸಿದವರು ಎಂದು ಕಂಬನಿ ಮಿಡಿದಿದ್ದಾರೆ.
ಎಲೆಮರೆ ಕಾಯಿಯಂತಿದ್ದ ಮಾತೃ ಸ್ವರೂಪಿ: ಬಿ.ವೈ. ವಿಜಯೇಂದ್ರ
85 ವರ್ಷಗಳ ಸಾರ್ಥಕ ಬದುಕನ್ನು ನಡೆಸಿದ ಮಾತೃ ಸ್ವರೂಪಿ ಚೆನ್ನಮ್ಮನವರು ಅಗಲಿರುವುದು ತುಂಬಾ ನೋವಿನ ಸಂಗತಿ. ದೇವೇಗೌಡರ ಜೀವನ ಸಂಗಾತಿಯಾಗಿ ಅವರ ಜೀವನದುದ್ದಕ್ಕೂ ಜತೆಗೆ ನಿಂತು, ಅವರ ಏಳಿಗೆಗೆ ಎಲೆಮರೆ ಕಾಯಿಯಂತೆ ಇದ್ದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.
ಸರಳತೆ ಹಾಗೂ ತಾಳ್ಮೆಯ ಸಾಕಾರಮೂರ್ತಿ: ಕೇಂದ್ರ ಸಚಿವ ಪ್ರಹ್ಲಾದ ಜೋಷಿ
ಸರಳತೆ ಹಾಗೂ ತಾಳ್ಮೆಯ ಸಾಕಾರಮೂರ್ತಿಯಾಗಿದ್ದ ಚೆನ್ನಮ್ಮನವರು, ದೇವೇಗೌಡರ ಸುದೀರ್ಘ ಸಾರ್ವಜನಿಕ ಜೀವನಕ್ಕೆ ಭದ್ರ ಬುನಾದಿಯಾಗಿ, ಇಡೀ ಕುಟುಂಬವನ್ನು ಮಮತೆಯಿಂದ ಮುನ್ನಡೆಸಿದ ಆದರ್ಶ ಮಾತೃಶಕ್ತಿಯಾಗಿದ್ದರು. ಅವರ ಅಗಲಿಕೆ ಅಭಿಮಾನಿ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ದುಖಿಃತರಾಗಿದ್ದಾರೆ.
ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ: ಸಚಿವ ಪ್ರಿಯಾಂಕ್ ಖರ್ಗೆ
ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಹೇಳಿರುವ ಸಚಿವ ಪ್ರಿಯಾಂಕ್ ಖರ್ಗೆ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಮತ್ತು ಬಂಧು ಮಿತ್ರರಿಗೆ ಈ ಅಪಾರ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ(ಏಜೆನ್ಸೀಸ್).