ಹೆಚ್.ಡಿ.ದೇವೇಗೌಡರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಾಂತ್ವನ
ಬೆಂಗಳೂರು: ಮಾಜಿ ಪ್ರಧಾನಿ ಹೆಚ್ಡಿಡಿ ಧರ್ಮಪತ್ನಿ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ತಾಯಿ ಶ್ರೀಮತಿ ಚೆನ್ನಮ್ಮ(85) ಅವರು ನಿಧನರಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಚೆನ್ನಮ್ಮನವರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದ ಹೆಚ್ಡಿಡಿ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಡಿಕೆಶಿ, ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ. ವಿ.ಸೋಮಣ್ಣ, ಚೆಲುವರಾಯಸ್ವಾಮಿ, ಸೇರಿ ರಾಜಕೀಯಕರು, ಶ್ರೀಗಳು ಸೇರಿ ಹಲವರು ನಾಯಕರು ಅಂತಿಮ ದರ್ಶನ ಪಡೆದು ಹೆಚ್.ಡಿ.ದೇವೇಗೌಡರಿಗೆ ಸಾಂತ್ವಾನ ಹೇಳಿದ್ದಾರೆ.
ಅಂತಿಮ ದರ್ಶನದ ಬಳಿಕ ಮಾತನಾಡಿರುವ ಸಿಎಂ ಡಿ.ಕೆ.ಶಿವಕುಮಾರ್, ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೀಮಂತ ಹೆಣ್ಣುಮಗಳು. ಅವರು ಅನೇಕ ರಾಜಕಾರಣಿಗಳಿಗೆ ಮಾತೃಸ್ವರೂಪಿಯಾಗಿದ್ದರು. ಅವರ ನಿಧನ ಸುದ್ದಿ ಕೇಳಿ ಆತಂಕವಾಯ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಿದೆ ಎಂಬ ಮಾಹಿತಿ ಇತ್ತು. ಅವರು ಅಪಾರ ದೈವಭಕ್ತೆಯಾಗಿದ್ದರು. ದೊಡ್ಡ ಕುಟುಂಬದ ಸುಖ ದುಃಖದಲ್ಲಿ ಭಾಗಿಯಾಗಿ ಸೇವೆ ಮಾಡಿದ್ದರು. ನಾವ್ಯಾರೂ ಭೂಮಿ ಮೇಲೆ ಶಾಶ್ವತವಾಗಿರಲು ಸಾಧ್ಯವಿಲ್ಲ. ಚೆನ್ನಮ್ಮನವರು ದೇವೇಗೌಡರು ಮತ್ತು ಕುಟುಂಬದ ಯಶಸ್ವಿಗೆ ಕಾರಣರಾಗಿದ್ದರು ಎಂದು ಹೇಳಿದ್ದಾರೆ.
ಚೆನ್ನಮ್ಮ ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ. ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಸೋಮವಾರ ಹಾಸನ ಜಿಲ್ಲೆಯಲ್ಲಿ ಅಂತ್ಯಕ್ರಿಯೆ ನಡೆಸುವುದಾಗಿ ಹೆಚ್ಡಿಕೆ ಹೇಳಿದ್ದಾರೆ. ಚೆನ್ನಮ್ಮನವರು ಮಾಜಿ ಪ್ರಧಾನಿ ಪತ್ನಿ ಮತ್ತು ಹಾಲಿ ಕೇಂದ್ರ ಸಚಿವರ ತಾಯಿಯಾಗಿದ್ದಾರೆ. ಹಾಗಾಗಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಹೆಚ್ಡಿಡಿಗೆ ಕರೆ ಮಾಡಿ ಸಾಂತ್ವನ ಹೇಳಿದ ಪ್ರಧಾನಿ
ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ನಿಧನ ಹಿನ್ನೆಲೆ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಪ್ರಧಾನಿ ಮೋದಿ ಅವರು ದೂರವಾಣಿ ಮೂಲಕ ಮಾತನಾಡಿದ್ದು, ತೀವ್ರ ಸಂತಾಪ ಸೂಚಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.