ಬೆಂಗಳೂರು: ಖಾಸಗಿ ಕಾರ್ಯಕ್ರಮ ಹಾಗೂ ಮತಕಳ್ಳತನ ವಿರುದ್ಧದ ಡಿ. 14 ರ ಪ್ರತಿಭಟನೆಗೆ ತಯಾರಿ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿದ್ದು, ಇದರ ಹೊರತಾಗಿ ಈ ಪ್ರವಾಸಕ್ಕೆ ರಾಜಕೀಯ ಮಹತ್ವವೇನೂ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು. ದೆಹಲಿ ಪ್ರವಾಸದ ಉದ್ದೇಶವೇನು ಎಂದು ಕೇಳಿದಾಗ, “ನನ್ನ ಆಪ್ತ ಸ್ನೇಹಿತರ ಮಗನ ಮದುವೆ ಇರುವ ಕಾರಣ ತೆರಳುತ್ತಿದ್ದೇನೆ. ಡಿ.14 ರಂದು ಮತ ಕಳ್ಳತನ ವಿರುದ್ಧ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮಾವೇಶವಿದೆ. ಅದಕ್ಕೆ ನಮ್ಮ ರಾಜ್ಯದ ಪ್ರತಿ ಜಿಲ್ಲೆಯಿಂದ 300 ಜನರನ್ನು ಕರೆದುಕೊಂಡು ಹೋಗಬೇಕು. ಈ ಬಗ್ಗೆ ಸಚಿವರಿಗೆ ಹಾಗೂ ಶಾಸಕರಿಗೆ ಸೂಚಿನೆ ನೀಡಿದ್ದೇನೆ. ನಮ್ಮ ಕಾರ್ಯಕರ್ತರಿಗೆ ವಾಸ್ತವ್ಯ ಕಲ್ಪಿಸಲು ಕೆಲವರಿಗೆ ಜವಾಬ್ದಾರಿ ವಹಿಸಬೇಕಾಗಿದೆ. ಈ ದೃಷ್ಟಿಯಿಂದ ನಾನು ದೆಹಲಿಗೆ ಹೋಗುತ್ತಿದ್ದೇನೆ. ನಾಳೆ ಸಚಿವ ಸಂಪುಟ ಸಭೆಗೆ ಮರಳಲಿದ್ದೇನೆ” ಎಂದು ತಿಳಿಸಿದರು.
ರಾಜಕಾರಣದಲ್ಲಿ ಜೈಕಾರ, ಧಿಕ್ಕಾರ ಸಹಜ
ಮಂಗಳೂರಿನಲ್ಲಿ ನಿಮ್ಮ ಅಭಿಮಾನಿಗಳು ಡಿ.ಕೆ, ಡಿ.ಕೆ.. ಎಂದು ಕೂಗಿದ್ದು, ಸಿದ್ದರಾಮಯ್ಯ ಅಭಿಮಾನಿಗಳು ಪೂರ್ಣಾವಧಿ ಸಿಎಂ ಎಂದು ಕೂಗಿದ್ದಾರೆ ಎಂದು ಕೇಳಿದಾಗ, “ಅಭಿಮಾನಿಗಳು ಈ ರೀತಿ ಕೂಗುವುದು ಸಹಜ. ಜನ ಕಳೆದ ಹತ್ತು ವರ್ಷಗಳಿಂದ ಡಿಕೆ, ಡಿಕೆ.. ಎಂದು ಕೂಗುತ್ತಿದ್ದಾರೆ. ಇದರಲ್ಲಿ ಹೊಸತೇನೂ ಇಲ್ಲ. ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ.. ಎಂದು ಕೂಗುವುದಿಲ್ಲವೇ? ಕಾಂಗ್ರೆಸ್ ಕಾರ್ಯಕರ್ತರು ರಾಹುಲ್.., ರಾಹುಲ್... ಎಂದು ಕೂಗುತ್ತಾರೆ. ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದು, ಸಿದ್ದು... ಎಂದು ಕೂಗುತ್ತಾರೆ. ಇದರಲ್ಲಿ ತಪ್ಪೇನಿಲ್ಲ, ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಇದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ರಾಜಕಾರಣದಲ್ಲಿ ಜೈಕಾರ, ಧಿಕ್ಕಾರ, ಅಭಿಮಾನದ ಮಾತುಗಳು ಸಹಜ” ಎಂದು ತಿಳಿಸಿದರು.
30 ತಿಂಗಳ ನಂತರ ಬೇಕಾದರೂ ಸಿಎಂ ಬದಲಾಗಬಹುದು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಪಕ್ಷ ಹಾಗೂ ನನಗೆ ಮಾತ್ರ ವಕ್ತಾರ. ಬೇರೆ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ತಿಳಿಸಿದರು.