ಸರ್ಕಾರಿ ಆಸ್ತಿ ಕಬಳಿಕೆ ಹಿನ್ನೆಲೆ  
ರಾಜ್ಯ

ಸರ್ಕಾರಿ ಜಮೀನು ಕಬಳಿಕೆ ಯತ್ನ: ಸರ್ಕಾರಿ ಅಧಿಕಾರಿಗಳು ಸೇರಿ ನಾಲ್ವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆ-grab government land

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ.ಮೌಲ್ಯದ ಸರ್ಕಾರಿ ಆಸ್ತಿ ಕಬಳಿಕೆ ಮತ್ತು ಭೂವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು, ವಿಜಯಶೇಖರ್ ತಂಗಯ್ಯ ಮತ್ತು ಮೂವರು ಸರ್ಕಾರಿ ನೌಕರರು ಸೇರಿ ನಾಲ್ವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ. 
ಮನುವಾರ್ಥೆ ಕಾವಲು, ಬಿನಾ ಮಂಗಲೆ, ಮೈಕೆಲ್‌ಪಾಳ್ಯ ಸೇರಿ ನಗರದ ಪ್ರಮುಖ ಪ್ರದೇಶಗಳಲ್ಲಿ 50 ಕೋಟಿ ರೂ.ಅಧಿಕ ಮೌಲ್ಯದ 18 ಗುಂಟೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಮೂಲಕ ಅಕ್ರಮವಾಗಿ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರಿ ಅಧಿಕಾರಿಗಳು ಸಂಚು ರೂಪಿಸಿದ್ದರು. ಭೂ ಪರಿವರ್ತನೆ ನಂತರ ವಿಜಯಶೇಖರ್ ತಂಗಯ್ಯ ಸೇರಿ ಇತರ ಆರೋಪಿಗಳು 2011 ಮತ್ತು 2012ರಲ್ಲಿ 17.5 ಗುಂಟೆ  ಸರ್ಕಾರಿ ಭೂಮಿಯನ್ನು ಖಾಸಗಿ ಹೆಸರಿನಲ್ಲಿ ನೋಂದಾಯಿಸಲು ವಂಚನೆ ಅರ್ಜಿಗಳನ್ನು ಸಲ್ಲಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 
ನಿಯಮ ಪ್ರಕಾರ ಭೂವರ್ಗಾವಣೆ ಮಾಡುವಂತಿಲ್ಲ. ಆದರೂ, ವಿಜಯಶೇಖರ್ ತಂಗಯ್ಯ ಎಂಬುವರು ಸರ್ಕಾರಿ ಅಧಿಕಾರಿಗಳೊಂದಿಗೆ ಸೇರಿಕೊಂಡು ನಕಲಿ ದಾಖಲೆ, ಸಹಿಯನ್ನು ಪೋರ್ಜರಿ ಮಾಡುವ ಮೂಲಕ ನಕಲಿ  ದಾಖಲೆ ಸೃಷ್ಟಿಸಿ ಕಂದಾಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಸಿಲುಕಿರುವ ಕೆಲ ಮೂವರು ನೌಕರರು, ಸರ್ಕಾರಿ ಹುದ್ದೆಯಿಂದ ನಿವೃತ್ತಿ ಪಡೆದಿದ್ದಾರೆ.ಆರೋಪಟ್ಟಿ ಪ್ರಮಾಣಪತ್ರಕ್ಕೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸಹಿ ಹಾಕಿದ್ದಾರೆ.