ಅರಕಲಗೂಡು ತಾಲೂಕಿನ ಶಂಭುನಾಥಪುರ ಗ್ರಾಮದ ಐತಿಹಾಸಿಕ ಶ್ರೀ ಸ್ವಯಂಭುನಾಥ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪರ್ಜನ್ಯ ಜಪ ಹಾಗೂ ಸೋಮಸೂತ್ರ ಪೂಜೆಯಲ್ಲಿ ವಿಪ್ರರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಅರಕಲಗೂಡು: ತಾಲೂಕಿನಾದ್ಯಂತ ಮಳೆಯ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಶಂಭುನಾಥಪುರ ಗ್ರಾಮದ ಐತಿಹಾಸಿಕ ಶ್ರೀ ಸ್ವಯಂಭುನಾಥ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ವಿಶೇಷ ಪರ್ಜನ್ಯ ಜಪ ಹಾಗೂ ಸೋಮಸೂತ್ರ ಪೂಜೆ ನೀರು ಕಟ್ಟುವ ಸೇವೆ ಭಕ್ತಿಭಾವದಿಂದ ನೆರವೇರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಹಿರಣ್ಯಯ್ಯ ಅವರ ಪೌರೋಹಿತ್ಯದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ತಾಲೂಕಿನ ಸೃಷ್ಟಿ, ಸಮೃದ್ಧಿ ಹಾಗೂ ಸಕಾಲದಲ್ಲಿ ಉತ್ತಮ ಮಳೆಯಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸ್ವಯಂಭು ಶಿವಲಿಂಗಕ್ಕೆ ನೀರು ಕಟ್ಟುವ ಮೂಲಕ ಜಪತಪಗಳನ್ನು ಅರಕಲಗೂಡಿನ ಕೋಟೆ ಬ್ರಾಹ್ಮಣ ಸಮುದಾಯದ ವಿಪ್ರ ಬಂಧುಗಳು ವಿಧಿವತ್ತಾಗಿ ನೆರವೇರಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಪಿ. ಶ್ರೀಧರ್‌ಗೌಡ ಅವರು ಶ್ರೀ ಸ್ವಯಂಭುನಾಥ ಶಂಭುಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಪರ್ಜನ್ಯ ಜಪ ಹಾಗೂ ಸೋಮಸೂತ್ರ ಸೇವೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರ್ಜನ್ಯ ಜಪ ಹಾಗೂ ಸೋಮಸೂತ್ರ ಸೇವೆ ಸಲ್ಲಿಸುವ ಮೂಲಕ ಮುನಿಸಿಕೊಂಡಿರುವ ವರುಣ ದೇವರನ್ನು ಒಲಿಸಿಕೊಳ್ಳಬಹುದೆಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದೇ ಸಂಪ್ರದಾಯದಂತೆ ತಾಲೂಕಿನ ಜನತೆ ಹಾಗೂ ರೈತರ ಹಿತದೃಷ್ಟಿಯಿಂದ ಈ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಉತ್ತಮ ಮಳೆಯಾಗಿ ಬೆಳೆಗಳು ಸಮೃದ್ಧಿಯಾಗಿ ರೈತರು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಭಕ್ತರು, ವಿಪ್ರರು ಭಾಗವಹಿಸಿ ತಾಲೂಕಿನ ಸುಭಿಕ್ಷತೆ ಮತ್ತು ಉತ್ತಮ ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಿದರು.