ಪಿರಿಯಾಪಟ್ಟಣದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು ದಿ.ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೆ.ಮಹದೇವ್, ಪಿ.ಎಂ.ಪ್ರಸನ್ನ, ಅಣ್ಣಯ್ಯ ಶೆಟ್ಟಿ, ಸುನೀತಾ ಮಂಜುನಾಥ್, ಎಚ್.ಡಿ.ರಾಜೇಂದ್ರ, ಅತ್ತರ್ ಮತ್ತಿನ್, ರಘುನಾಥ್, ಎಸ್.ರಾಮು ಇತರರಿದ್ದರು.
- ಮಾಜಿ ಶಾಸಕ ಕೆ.ಮಹದೇವ್
- ಜೆಡಿಎಸ್ ತಾಲೂಕು ಘಟಕ
ಪಿರಿಯಾಪಟ್ಟಣ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ದಿ.ಚನ್ನಮ್ಮ ಅವರ ಆದರ್ಶ ಜೀವನ ಪ್ರತಿಯೊಬ್ಬರಿಗೂ ಮಾರ್ಗದರ್ಶನ ಎಂದು ಮಾಜಿ ಶಾಸಕ ಕೆ.ಮಹದೇವ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಜೆಡಿಎಸ್ ತಾಲೂಕು ಘಟಕ ವತಿಯಿಂದ ಭಾನುವಾರ ಆಯೋಜಿಸಿದ್ದ ದಿ.ಚನ್ನಮ್ಮ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಗೌಡರ ಯಶಸ್ಸಿನ ಹಾದಿಗೆ ಪತ್ನಿ ಚನ್ನಮ್ಮ ಅವರ ಕೊಡುಗೆ ಅಪಾರ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಚನ್ನಮ್ಮ ಅವರು ತಮ್ಮ ಕುಟುಂಬದ ಸದಸ್ಯರು ಎಷ್ಟೇ ಉನ್ನತ ಸ್ಥಾನ ತಲುಪಿದ್ದರೂ ಅಹಂ ಹೊಂದಿರಲಿಲ್ಲ ಎಂದರು.
ಇಂದಿನ ಪೀಳಿಗೆ ಮನೆಯ ಆಧಾರ ಸ್ತಂಭವಾಗಿ ದಾಂಪತ್ಯ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ಅವರನ್ನು ನೋಡಿ ಕಲಿಯಬೇಕು. ದೇವೇಗೌಡರು ಗುತ್ತಿಗೆದಾರನಾಗಿ ವೃತ್ತಿ ಆರಂಭಿಸಲು ಮತ್ತು ರಾಜಕೀಯ ಜೀವನ ಪ್ರಾರಂಭಿಸಲು ಚನ್ನಮ್ಮ ಅವರ ಮಾರ್ಗದರ್ಶನ ಮತ್ತು ಸಹಕಾರ ಕಾರಣವಾಗಿತ್ತು ಎಮದ ಅವರು, ಜು.30 ರಂದು ಹೊಳೆನರಸೀಪುರದಲ್ಲಿ ಆಯೋಜಿಸಿರುವ ಶ್ರದ್ಧಾಂಜಲಿ ಸಭೆಯಲ್ಲಿ ತಾಲೂಕಿನ ಜನತೆ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ನಮ್ಮ ಕುಟುಂಬಕ್ಕೆ ದೇವೇಗೌಡರ ಕುಟುಂಬ ಸಾಕಷ್ಟು ಸಹಕಾರ ನೀಡಿದೆ. ಚನ್ನಮ ಆದರ್ಶ ಮಹಿಳೆಯಾಗಿದ್ದು, ನಮ್ಮ ಕುಟುಂಬ ಪ್ರಥಮವಾಗಿ ಚುನಾವಣೆಗೆ ಪ್ರವೇಶ ಮಾಡಿದಾಗ ಆಶೀರ್ವಾದ ಮಾಡಿದ್ದರು ಎಂದು ಸ್ಮರಿಸಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಮಂಜುನಾಥ್, ಮೈಮುಲ್ ಮಾಜಿ ನಿರ್ದೇಶಕ ಎಚ್.ಡಿ.ರಾಜೇಂದ್ರ, ತಾಪಂ ಮಾಜಿ ಸದಸ್ಯ ಅತ್ತರ್ ಮತ್ತಿನ್, ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ್ ಸಿಂಗ್, ಮಾಜಿ ಸದಸ್ಯರಾದ ಪಿ.ಸಿ.ಕೃಷ್ಣ, ನಿರಂಜನ್, ಪ್ರಕಾಶ್‌ಸಿಂಗ್, ಮುಖಂಡರಾದ ರಘುನಾಥ್, ಎಸ್.ರಾಮು, ಕೆ.ರಮೇಶ್, ಬಿ.ಜಿ.ಸತೀಶ್, ಜೆ.ಎಸ್.ನಾಗರಾಜ್, ಸೋಮಶೇಖರ್, ಕುಮಾರ, ಅಶೋಕ, ತಿಮ್ಮನಾಯಕ, ಸಿ.ಎನ್.ರವಿ, ವಿನೋದ್, ರಾಮಚಂದ್ರ, ಕಾವೇರಮ್ಮ ಇತರರಿದ್ದರು.