Change the path of life with education.
ಕೆಜಿಎಫ್: ಮಕ್ಕಳು ಶ್ರದ್ಧೆಯಿಂದ ವಿದ್ಯೆ ಕಲಿತರೆ ಕುಟುಂಬ ಹಾಗೂ ಜೀವನದ ಪಥವನ್ನೇ ಬದಲಿಸಬಲ್ಲ ಶಕ್ತಿ ಹೊಂದುತ್ತಾರೆ. ಪಾಲಕರು ಮಕ್ಕಳಿಗೆ ತಪ್ಪದೇ ವಿದ್ಯಾಭ್ಯಾಸ ನೀಡಲು ಮುಂದಾಗಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಹೇಳಿದರು.
ನಗರದ ಉರಿಗಾಂ ಪೇಟೆಯ ನೆಹರು ಕಲ್ಯಾಣ ಮಂದಿರದಲ್ಲಿ ಮಹಿಳಾ ಮೀಲನ್ ಟ್ರಸ್ಟ್ ಹಾಗೂ ಬೆಂಗಳೂರು ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ದೇಶದ ಆಸ್ತಿ. ವಿದ್ಯೆಯೆಡೆಗೆ ಮಕ್ಕಳು ಹೆಚ್ಚಿನ ಆಸಕ್ತಿ ವಹಿಸಬೇಕು ಮತ್ತು ತಂದೆ, ತಾಯಿಯರಿಗೆ, ಶಿಕ್ಷಕರಿಗೆ ಗೌರವ ನೀಡಬೇಕು ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಹಾಯವಾಣಿ ಇದ್ದು, ಸಾರ್ವಜನಿಕರು ಏನೇ ಸಮಸ್ಯೆ ಬಂದರೆ ಕೂಡಲೇ 112ಕ್ಕೆ ಕರೆ ಮಾಡಿದಲ್ಲಿ 10 ನಿಮಿಷಕ್ಕೆ ಪೊಲೀಸರು ಬರಲಿದ್ದಾರೆ ಎಂದರು.
ಮಹಿಳಾ ಮಿಲನ್ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮನ್ ಮಾತನಾಡಿ, ಬಿಜಿಎಂಎಲ್ ಕಂಪನಿಗೆ ಬೀಗ ಜಡಿದು 26 ವರ್ಷ ಕಳೆದಿದ್ದು, ಅಂದಿನಿಂದ ಮಹಿಳಾ ಮಿಲನ್ ಟ್ರಸ್ಟ್ ಮೂಲಕವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಸೇವೆ ಮಾಡುತ್ತ ಬಂದಿದ್ದೇವೆ. ಬಿಜಿಎಂಎಲ್ ಭಾಗದಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ.
ಶೌಚಗೃಹ ನಿಮಾರ್ಣ ಮಾಡಲಾಗಿದೆ. ಬಡ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಪಾವತಿ ಮಾಡಬೇಕು ಎಂಬ ಉದ್ದೇಶ ಹೊಂದಿದ್ದು, ಭಗವಂತ ಆಶೀರ್ವಾದ ಮಾಡಿದರೆ ಎಲ್ಲ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಪಾವತಿಸಲಾಗುವುದು ಎಂದು ಹೇಳಿದರು. ಸುಮಾರು 500 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.
ಬಿಜಿಎಂಎಲ್ ನಿವೃತ್ತ ಇಂಜಿನಿಯರ್ ನಾಥನ್, ಸೋಮಸುಂದರಂ, ಶಿವಕುಮಾರ್, ಮಹಿಳಾ ಮಿಲನ್ ಸೆಕ್ರೆಟರಿ ವೈಲೆಟ್ ಇದ್ದರು.