ರೋಗಗಳನ್ನು ತಡೆಗಟ್ಟಲು ಜೀವನಶೈಲಿ ಬದಲಾಯಿಸಿ lifestyle 
ರಾಜ್ಯ

ರೋಗಗಳನ್ನು ತಡೆಗಟ್ಟಲು ಜೀವನಶೈಲಿ ಬದಲಾಯಿಸಿ lifestyle

ಪ್ರಮುಖ ಮುಖ್ಯಾಂಶಗಳು

  • ಕೈವಾರದಲ್ಲಿ ಉಚಿತ ಆರೋಗ್ಯ ತಪಾಸಣೆ
ಚಿಂತಾಮಣಿ: ಉತ್ತಮ ಆರೋಗ್ಯವಿಲ್ಲದೆ, ಸಂಪತ್ತು, ಕೀರ್ತಿ, ಅಧಿಕಾರವು ಗಳಿಸಿದರೂ ಅರ್ಥಹೀನವಾಗುತ್ತದೆ. ಆದ್ದರಿಂದ ಎಲ್ಲರೂ ರೋಗಗಳನ್ನು ತಡೆಗಟ್ಟಲು ಜೀವನಶೈಲಿ ಬದಲಾಯಿಸಿಕೊಳ್ಳಿ ಎಂದು ಕೈವಾರದ ಧಮಾರ್ಧಿಕಾರಿ ಡಾ.ಎಂ.ಆರ್​.ಜಯರಾಮ್​ ತಿಳಿಸಿದರು. lifestyle
ತಾಲೂಕಿನ ಕೈವಾರ ಗ್ರಾಮದಲ್ಲಿ ಶ್ರೀ ಯೋಗಿನಾರಾಯಣ ಮಠ ಮತ್ತು ಎಂ.ಎಸ್​.ರಾಮಯ್ಯ ವೈದ್ಯಕಿಯ ಆಸ್ಪತ್ರೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮಠದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯ ಸಂಪತ್ತು ಇದ್ದವನೆ ದೊಡ್ಡ ಶ್ರೀಮಂತ, ನಾವು ಆರೋಗ್ಯವಾಗಿ ಇದ್ದರೆ ಏನು ಬೇಕಾದರೂ ಸಾಧಿಸಿ ಸಂಪತ್ತನ್ನು ಗಳಿಸಬಹುದು ಎಂದರು.
ಮಠದ ವ್ಯವಸ್ಥಾಪಕ ಕೆ.ಲಕ್ಷ್ಮೀನಾರಾಯಣ ಮಾತನಾಡಿ, ಪ್ರತಿ ತಿಂಗಳ 4ನೇ ಭಾನುವಾರ ತಾತಯ್ಯನವರ ಮಠದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯುತ್ತದೆ. ಪ್ರತಿಯೊಬ್ಬರು ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.
ಶಿಬಿರದಲ್ಲಿ ಮಕ್ಕಳ ರೋಗ, ಕಣ್ಣಿನ ತಪಾಸಣೆ, ಕ್ಯಾನ್ಸರ್​ ರೋಗ ಪತ್ತೆಹಚ್ಚುವಿಕೆ, ಕಿವಿ, ಮೂಗು, ಗಂಟಲು ರೋಗ, ಎಲುಬು ಕಿಲುಗಳ ರೋಗ, ಚರ್ಮ ರೋಗ, ಹಲ್ಲಿನ, ಬಿಪಿ, ಶುಗರ್​, ಇಸಿಜಿ, ಸಾಮಾನ್ಯ ಶಸ್ತ್ರ ಚಿಕಿತ್ಸೆ ವಿಭಾಗಗಳ ಕೌಂಟರ್​ ತೆರೆದು ರಾಮಯ್ಯ ಕಾಲೇಜಿನ ತಜ್ಞ ವೈದ್ಯರು ರೋಗಿಗಳಿಗೆ ತಪಾಸಣೆ ಮಾಡಿದರು.
ಸಾಮಾನ್ಯ ರೋಗಗಳಿಗೆ ಸ್ಥಳದಲ್ಲಿ ಚಿಕಿತ್ಸೆ ನೀಡಿದರು. ಲಭ್ಯವಿರುವ ಮಾತ್ರೆ ಮತ್ತು ಔಷಧಗಳನ್ನು ಉಚಿತವಾಗಿ ವಿತರಿಸಿದರು. ಹೆಚ್ಚಿನ ಚಿಕಿತ್ಸೆ ಅವಶ್ಯವಿರುವ ರೋಗಿಗಳಿಗೆ ಬೆಂಗಳೂರು ರಾಮಯ್ಯ ಆಸ್ಪತ್ರೆಯಲ್ಲಿ ರಿಯಾಯತಿ ದರದಲ್ಲಿ ಶಸ್ತ್ರಚಿಕಿತ್ಸೆ ಮತ್ತು ತಂತ್ರಜ್ಞಾನ ಆಧಾರಿತ ಯಂತ್ರಗಳ ಮೂಲಕ ತಪಾಸಣೆ ಮಾಡುವ ಭರವಸೆ ನೀಡಿದರು. ಕೈವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ 150 ಕ್ಕೂ ಹೆಚ್ಚು ಗ್ರಾಮಸ್ಥರು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದರು.
ಆಸ್ಪತ್ರೆ ವೈದ್ಯರಾದ ಡಾ.ಅಂಜನ್​, ಡಾ.ವೀಣಾ, ಡಾ.ಗರಿಮಾ, ಡಾ.ಕಿರಣ್​, ಡಾ.ವೀರೇಶ್​, ಡಾ.ಮನಸ್ವಿನಿ ಮತ್ತು ಡಾ.ನಮಿತಾ ಚಂಡೆರ್​ ಆರೋಗ್ಯತಪಾಸಣೆ ಮಾಡಿದರು. ಆಪ್ತ ಸಮಾಲೋಚಕರಾದ ಯಮುನಾ ಮತ್ತು ಆನಂದ್​ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.