ನೆಲಮಂಗಲದ ದಿವ್ಯಜ್ಯೋತಿ ಸಭಾಂಗಣದಲ್ಲಿ ತಾಲೂಕು ಕಸಾಪದಿಂದ ಆಯೋಜಿಸಿದ್ದ ಅಧಿಕಾರ ಸ್ವೀಕಾರ ಹಾಗೂ ಕಾರ್ಯಕ್ರಮ ಪಟ್ಟಿ ಬಿಡುಗಡೆ ಸಮಾರಂಭದಲ್ಲಿ ನಿಟಕಪೂರ್ವ ಅಧ್ಯಕ್ಷ ಪ್ರಕಾಶ್​ ಅವರು ನಿವೃತ್ತ ಶಿಕ್ಷಕ ಕೆ.ಬಿ.ಸದಾನಂದಾರಾಧ್ಯ ಅವರಿಗೆ ಕನ್ನಡ ಬಾವುಟ ನೀಡಿ ಅಧಿಕಾರ ಹಸ್ತಾಂತರ ಮಾಡಿದರು. ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಹಿರಿಯ ಸಾಹಿತಿ ಮಣ್ಣೆಮೋಹನ್​, ಗೋಪಾಲ್​, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಹೇಮಂತ್​ಕುಮಾರ್​, ಬಿಇಒ ರಮೇಶ್​ ಇದ್ದರು.  
ರಾಜ್ಯ

ಉತ್ತಮ ಭವಿಷ್ಯಕ್ಕೆ ಬದಲಾವಣೆ ಅಗತ್ಯ / NELAMANGAL

ಬೆಂಗಳೂರು ಗ್ರಾಮಾಂತರ ಡೆಸ್ಕ್
ನೆಲಮಂಗಲ : ಕನ್ನಡ ನಾಡು, ನುಡಿ ಸಾಹಿತ್ಯ ಉಳಿಸುವುದು ಕೇವಲ ಸಾಹಿತಿಯ ಕೆಲಸವಲ್ಲ, ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಹೇಳಿದರು.
ನಗರದ ದಿವ್ಯಜ್ಯೋತಿ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ನಿಂದ ಆಯೋಜಿಸಿದ್ದ ಅಧಿಕಾರ ಸ್ವೀಕಾರ ಹಾಗೂ ಕಾರ್ಯಕ್ರಮ ಪಟ್ಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ತಾಲೂಕಿನಲ್ಲಿ 39 ವರ್ಷದಿಂದ ಸಾಹಿತ್ಯ ಪರಿಷತ್ತು ಅಸ್ತಿತ್ವದಲ್ಲಿದ್ದು, 14 ಜನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರತಿಯೊಬ್ಬ ಕನ್ನಡಿಗರು ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಪರಿಷತ್ತಿನ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸದಸ್ಯತ್ವ ಪಡೆದುಕೊಂಡವರು ಕುಟುಂಬದ ಸದಸ್ಯರನ್ನು ಪರಿಷತ್ತಿನ ಸದಸ್ಯರಾಗಿ ಮಾಡಬೇಕು. ಜತೆಗೆ ಹಣ ದುಂದು ವೆಚ್ಚ ಮಾಡಿ ಆಡಂಬರದಿಂದ ಪರಿಷತ್ತಿನ ಕಾರ್ಯ ಮಾಡುವ ಅವಶ್ಯಕತೆ ಇಲ್ಲ. ಆಡಂಬರ ಮುಖ್ಯವಲ್ಲ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವುದು ಮುಖ್ಯ. ಪರಿಷತ್ತಿನ ಪ್ರತಿಯೊಂದು ಕಾರ್ಯಕ್ರಮದಲ್ಲೂ ಹಾರು ತುರಾಯಿ ಹಾಕುವ ಬದಲು ಪುಸ್ತಕ ನೀಡುವುದನ್ನು ಮೈಗ್ಗೂಡಿಸಿಕೊಳ್ಳಬೇಕು. ಸಣ್ಣಪುಟ್ಟ ಬದಲಾವಣೆಗಳು ಭವಿಷ್ಯವನ್ನು ಉತ್ತಮಗೊಳಿಸುತ್ತದೆ. ಕನ್ನಡವನ್ನು ಹೆಚ್ಚು ಮಾತನಾಡಿ ಗೌರವಿಸಿ, ಪ್ರೀತಿಸಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ವಿಶ್ವದಲ್ಲೇ ಅತಿಹೆಚ್ಚು ಸದಸ್ಯತ್ವ ಹೊಂದಿರುವ ಪರಿಷತ್​ ಇದಾಗಿದ್ದು, ತನ್ನದೇ ಆದ ಘನತೆ ಹೊಂದಿದ ಬಹುದೊಡ್ಡ ಸಂಸ್ಥೆ. ಆ ಘನತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಡಬೇಕು. ಹಿಂದಿನ ಅಧ್ಯಕ್ಷರಂತೆ ಉತ್ತಮ ಕೆಲಸ ಪರಿಷತ್ತಿನ ಗೌರವ ಹೆಚ್ಚಿಸಬೇಕು ಎಂದು ಹೇಳಿದರು.
ಮುಖಂಡ ಉಮೇಶ್​ಗೌಡ, ಶಾಂತರಾಜು, ರೇವಣಸಿದ್ದಯ್ಯ, ಲೋಕೇಶ್​, ಸಾಹಿತ್ಯ ಪರಿಷತ್ತು ರಾಜ್ಯ ಪ್ರತಿನಿಧಿ ಡಾ.ಕೃಷ್ಣಮೂರ್ತಿ, ಜಿಲ್ಲಾ ಕೋಶಾಧ್ಯಕ್ಷ ಮುನಿರಾಜು, ಜಿಲ್ಲಾ ಪ್ರತಿನಿಧಿ ರಾಮಕೃಷ್ಣಪ್ಪ, ಮಂಜುಳಾಸಿದ್ದರಾಜು, ತಾಲೂಕು ನೂತನ ಗೌರವ ಕಾರ್ಯದರ್ಶಿ ಸುರೇಶ್​, ಆನಂದ್​ಮೌರ್ಯ, ಪದಾಧಿಕಾರಿಗಳಾದ ಸಿದ್ದಯ್ಯ, ರಂಗಸ್ವಾಮಿ, ಮಲ್ಲೇಶ್​, ಲಕ್ಷ್ಮೀಕಾಂತ್​, ರಾಮು, ರವೀಶ್​ ಇತರರು ಇದ್ದರು.
ಅಧಿಕಾರ ಸ್ವೀಕಾರ : ನಿಟಕಪೂರ್ವ ಅಧ್ಯಕ್ಷ ಪ್ರಕಾಶ್​ ಅವರು ನಿವೃತ್ತ ಶಿಕ್ಷಕ ಕೆ.ಬಿ.ಸದಾನಂದಾರಾಧ್ಯ ಅವರಿಗೆ ಕನ್ನಡ ಬಾವುಟ ಹಸ್ತಾಂತರ ಮಾಡಿದರು. ಬಳಿಕ ಸದಾನಂದಾರಾಧ್ಯ ಅಧ್ಯಕ್ಷರಾಗಿ ಹಾಗೂ ಹಲವರು ಪದಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಕಾರ್ಯಕ್ರಮದ ಪಟ್ಟಿಯನ್ನು ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್​ಕುಮಾರ್​ ಬಿಡುಗಡೆ ಮಾಡಿದರು. ಜತೆಗೆ ಕವಿಗೋಷ್ಠಿ, ಭರತನಾಟ್ಯ, ವಚನಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.