ಶಿಕ್ಷಣ ಸಚಿವ ಮಧು ಬಂಗಾರಪ್ಪ  
ರಾಜ್ಯ

ಶಿಕ್ಷಕರ ವರ್ಗಾವಣೆ ನೀತಿ ಬದಲು! ಕರಡು ಅಧಿಸೂಚನೆ ಪ್ರಕಟ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಂಗಳೂರು: ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಮಹತ್ತರ ಬದಲಾವಣೆ ಮಾಡಿ ಕರಡು ಅಧಿಸೂಚನೆ ಪ್ರಕಟಿಸಿದ್ದು, ಆಕ್ಷೇಪಣೆ ಅಥವಾ ಸಲಹೆಗಳನ್ನು ಸೂಚಿಸಲು ಅವಕಾಶ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ತಾಲೂಕುವಾರು ಖಾಲಿ ಹುದ್ದೆಗಳ ಶೇಕಡವಾರು ಮಿತಿಯನ್ನು ಶೇ.25ಕ್ಕೆ ಸಡಿಲಿಸಲಾಗಿದೆ. ಇದರಿಂದ ಹೆಚ್ಚಿನ ವರ್ಗಾವಣೆಗೆ ಅವಕಾಶಗಳಿರಲಿವೆ ಎಂದಿದ್ದಾರೆ.

ಕರ್ನಾಟಕ ಪಬ್ಲಿಕ್​ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರಬಾರದೆಂಬ ಕಾರಣಕ್ಕೆ ಈ ಶಾಲೆಗಳಿಗೆ ವರ್ಗಾವಣೆಗೊಳ್ಳುವ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಪ್ರೋತ್ಸಾಹಕವಾಗಿ ಹೆಚ್ಚುವರಿ ಕೃಪಾಂಕಗಳನ್ನು ನೀಡಲಾಗುತ್ತದೆ. ಅಲ್ಲದೆ ಈ ಶಾಲೆಗಳಲ್ಲಿನ ಕನಿಷ್ಠ ಸೇವಾವಧಿಯನ್ನು 9 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಒಂದೇ ಶಾಲೆಯಲ್ಲಿ ಶಿಕ್ಷಕರು ಹೆಚ್ಚು ವರ್ಷ ಕೆಲಸ ಮಾಡುವುದರಿಂದ, ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡು, ಅವರ ಸಾಮರ್ಥ್ಯವನ್ನು ಅರಿತು, ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿದ್ಯಾರ್ಥಿಗಳ ನಿರಂತರ ಕಲಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂಬುದು ನನ್ನ ಭಾವನೆ. ವರ್ಗಾವಣೆ ಪ್ರಕ್ರಿಯೆಯಲ್ಲಿ ಗರ್ಭಿಣಿ ಶಿಕ್ಷಕಿಯರಿಗೆ ಮತ್ತು 5 ವರ್ಷದೊಳಗಿನ ಮಗು ಹೊಂದಿರುವ ತಾಯಂದಿರಿಗೆ ವಿಶೇಷ ಸಡಿಲಿಕೆ ನೀಡಿದ್ದೇವೆ. ಅನಾರೋಗ್ಯ ಪೀಡಿತರಿಗೆ ವಿಶೇಷ ಚೇತನ ಶಿಕ್ಷಕರಿಗೆ ಮಾನವೀಯತೆಯ ನೆಲೆಯಲ್ಲಿ ಯಾವೆಲ್ಲಾ ರೀತಿ ನೆರವಾಗಬಹುದೋ, ಅದೆಲ್ಲಾ ಬದಲಾವಣೆ ಮಾಡಿದ್ದೇವೆ. ವರ್ಗಾವಣೆ ಪ್ರಕ್ರಿಯೆಯಲ್ಲಿ ನಾವು ಮಾಡಿರುವ ಈ ಎಲ್ಲಾ ಬದಲಾವಣೆಗಳು ಶಿಕ್ಷಕ ಸಮುದಾಯಕ್ಕೆ ಖುಷಿ ನೀಡಲಿದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.