- ಆಡಳಿತ ವೈಫಲ್ಯ ಪ್ರಶ್ನಿಸಿದರೆ ಬೆದರಿಸುತ್ತಿರುವ ಕಾಂಗ್ರೆಸ್ ವರ್ತನೆಗೆ ಕಲ್ಲೂರ ಕಿಡಿ
ಕಲಬುರಗಿ: ಅಭಿವೃದ್ಧಿ ಕುರಿತು ಪ್ರಶ್ನೆ ಮಾಡಿರುವ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಅವರ ಕುರಿತು ಕೆಲವರು ವೆಯಕ್ತಿಕ ನಿಂದನೆ ಮಾಡಿರುವುದನ್ನು ಬಿಜೆಪಿ ನಗರ ಒಬಿಸಿ ಘಟಕ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಖಂಡಿಸಿದ್ದಾರೆ. ಅಂತಹವರು ತಮ್ಮ ನಿಲುವು ಬದಲಿಸಿಕೊಂಡು ಕ್ಷಮೆಯಾಚಿಸದೆ ಹೋದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರ ಮತ್ತು ಜಿಲ್ಲೆಯಲ್ಲಿ ಅಭಿವೃದ್ದಿ ಕಾಮಗಾರಿಗಳಿಲ್ಲದೆ ಆಡಳಿತ ಸಂಪೂರ್ಣ ವಿಫಲವಾಗಿದೆ. ನಗರದಲ್ಲಿ ಹದಗೆಟ್ಟು ಹೋದ ರಸ್ತೆಯಲ್ಲಿ ಗುಂಡಿಗಳ ಆರ್ಭಟ ಮತ್ತು ಜಿಲ್ಲಾಡಳಿತದ ಕಾರ್ಯವೈಖರಿ, ಹಾಳಾದ ರಿಂಗ್ರಸ್ತೆ, ಸೂಪರ್ ಮಾರ್ಕೆಟ್ನಲ್ಲಿ ಜನರು ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರ ಬಗ್ಗೆ ಚಂದು ಪಾಟೀಲರು, ಡಿಸಿ ಕಚೇರಿ ಮುಂದೆ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಾತನಾಡಿ ಅಧಿಕಾರ ನಡೆಸುತ್ತಿರುವವರಿಗೆ ಪ್ರಶ್ನೆ ಕೇಳಿದರೆ, ಕೆಲ ಕಾಂಗ್ರೆಸ್ ನಾಯಕರು ವಯಕ್ತಿಕ ನಿಂದನೆ ಮಾಡುವುದು ಎಷ್ಟು ಸರಿ ಎಂದು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಆಡಳಿತ ವ್ಯವಸ್ಥೆ ಕುರಿತು ಪ್ರಶ್ನಿಸಿದರೆ ವಿಪಕ್ಷದ ನಾಯಕರಿಗೆ ವೈಯಕ್ತಿಕ ನಿಂದನೆ ಮಾಡಿ ಪ್ರಕರಣ ದಾಖಲಿಸುವ, ಹೆದರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರಿಗೆ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಕೇಳದೆ ಮತ್ಯಾರಿಗೆ ಕೇಳಬೇಕು, ಸಮಸ್ಯೆಗಳ ಕುರಿತು ವಿರೋಧ ಪಕ್ಷದಲ್ಲಿದ್ದವರು ಪ್ರಶ್ನೆ ಕೇಳಬಾರದೆಂದರೆ ಅಧಿಕಾರ ಬಿಟ್ಟು ಮನೆಯಲ್ಲಿ ಕೂರಿ ಎಂದು ಕಲ್ಲೂರ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ಸರ-ಮನೆಗಳ್ಳತನ, ಅಕ್ರಮ ಗಾಂಜಾ ಮಾರಾಟ, ಮಟಕಾ ದಂಧೆ, ಅಕ್ರಮ ಮರಳು ಸಾಗಾಟ ಸೇರಿದಂತೆ ಅನೇಕ ಅಕ್ರಮಗಳಿಗೆ ಕಡಿವಾಣ ಹಾಕಬೇಕಾದವರು ಯಾರು? ಎಂಬುದು ಅರಿತುಕೊಂಡು ಮಾತನಾಡಲಿ ಇಲ್ಲವೇ ಯಾರು ಕೇಳಬೇಕು ಎಂಬುದರ ಕುರಿತು ಸ್ಪಷ್ಟನೆ ನೀಡಲಿ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿ ಅಭಿವೃದ್ದಿ ಕಾಮಗಾರಿಗಳ ನಡೆಯುತ್ತಿಲ್ಲ. ಬದಲಿಗೆ ಜನರಿಂದ ಹಣ ಲೂಟಿ ಮಾಡಲಾಗುತ್ತಿದೆ. ಸರ್ಕಾರ ವೈಫಲ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ಷಮತೆ ಕುಗ್ಗಿದೆ. ಉದ್ಯೋಗ, ಕುಡಿಯುವ ನೀರಿನ ಸೌಲಭ್ಯ, ರಸ್ತೆ ಸುರಕ್ಷತೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಸಚಿವರು ವಿಫಲರಾಗಿದ್ದಾರೆ ಎಂದು ದೇಸಾಯಿಕಲ್ಲೂರ ತಿರುಗೇಟು ನೀಡಿದ್ದಾರೆ.