ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿ ಚಂದ್ರಮೌಳೇಶ್ವರ ಬ್ರಹ್ಮರಥೋತ್ಸವ ಅಪಾರ ಭಕ್ತಗಣದ ನಡುವೆ ಅದ್ದೂರಿಯಾಗಿ ನೆರವೇರಿತು.
ದೊಡ್ಡಬಳ್ಳಾಪುರ : ನಗರದ ತೇರಿನ ಬೀದಿಯಲ್ಲಿ ಪ್ರಸನ್ನ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನೆರವೇರಿತು.ಜಾತ್ರೆ ಹಿನ್ನೆಲೆ ಸ್ವಾಮಿಗೆ ವಿಶೇಷ ಅಲಂಕಾರ, ವಿವಿಧ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಮುಜರಾಯಿ ಇಲಾಖೆ ಹಾಗೂ ದೇವಾಲಯದ ಭಕ್ತ ಮಂಡಳಿಯಿಂದ ಹಮ್ಮಿಕೊಂಡಿದ್ದ ಬ್ರಹ್ಮ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಬಾಳೆಹಣ್ಣು, ದವನ ಅರ್ಪಿಸಿ ಭಕ್ತಿ ಮೆರೆದರು. ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭವಾಗಿದ್ದು, ರಥೋತ್ಸವಕ್ಕೂ ಮುನ್ನ ಅನೇಕರು ರಥಕ್ಕೆ ಪೂಜೆ ಸಲ್ಲಿಸಿದರು.
ದೇಗುಲಗಳಲ್ಲಿ ಪೂಜಾ ಕಾರ್ಯ : ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿ ಕಡೆ ಕಾರ್ತಿಕ ಹಾಗೂ ಬ್ರಹ್ಮರಥೋತ್ಸವದ ಭಾಗವಾಗಿ ಧಾರ್ಮಿಕ ಪೂಜಾ ಕಾರ್ಯಗಳು ಕಳೆಗಟ್ಟಿದ್ದವು. ಅರುಣಾಚಲೇಶ್ವರ, ವೆಂಕಟರಮಣಸ್ವಾಮಿ, ಚಂದ್ರಮೌಳೇಶ್ವರ ಸೇರಿ ವಿವಿಧ ದೇಗುಲಗಳಲ್ಲಿ ಅಭಿಷೇಕ, ಅಲಂಕಾರ ಸೇರಿ ವಿವಿಧ ಪೂಜಾ ಕಾರ್ಯಗಳನ್ನು ಸಲ್ಲಿಸಲಾಯಿತು. ಬ್ರಹ್ಮರಥೋತ್ಸವದ ಹಿನ್ನೆಲೆ ಶ್ರೀ ಶ್ರೀಕಂಠೇಶ್ವರ ಭಕ್ತ ಮಂಡಳಿ, ನಂಜುಂಡೇಶ್ವರ ಸೇವಾ ಸಮಿತಿ, ಶ್ರೀ ಮುತ್ಯಾಲಮ್ಮ ಸೇವಾ ಸಮಿತಿ ಸೇರಿ ವಿವಿಧ ಅರವಂಟಿಗೆ ಸಮಿತಿಗಳಿಂದ ಭಕ್ತರಿಗೆ ಅರವಂಟಿಗೆ ಹಾಗೂ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.18ರಂದು ಹಗಲು ಪರಿಷೆ, ಅಶ್ವವಾಹನೋತ್ಸವ, ವೀರಭದ್ರನ ಕುಣಿತ ನಡೆಯಲಿದೆ.