ಬೆಂಗಳೂರು: ನಗರದಲ್ಲಿ ಬುಧವಾರ(ಆ. 12) ಬೆಳಗಿನ ಜಾವ ಇಬ್ಬರು ಸರಗಳ್ಳರು(Chain snatchers) ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿ 25 ಗ್ರಾಂ ಚಿನ್ನದ ಸರವನ್ನು ದೋಚಿದ್ದಾರೆ. ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೀದಿ ನಾಯಿಯೊಂದು ದಾಳಿ ನಡೆಸಲು ವಿಫಲ ಪ್ರಯತ್ನ ನಡೆಸಿದ್ದು ಸೆರೆಯಾಗಿದೆ.
ದೊಡ್ಡಬಿದರಕಲ್ಲು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಾಲಿನ ಅಂಗಡಿ ನಡೆಸುತ್ತಿರುವ ವಿಜಯಮ್ಮ ಎಂಬುವರು ದಿನದ ಕೆಲಸ ಮುಗಿಸಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಮನೆಗೆ ಹಿಂತಿರುಗುವಾಗ ಸರಗಳ್ಳರು ಡಿಯೋ ಸ್ಕೂಟರ್‌ನಲ್ಲಿ ಹಿಂದೆಯಿಂದ ಆಗಮಿಸಿ ಮಹಿಳೆಯನ್ನು ಹಿಡಿದು ನೆಲಕ್ಕೆ ಕೆಡವಿ ಹಲ್ಲೆ ಮಾಡಿ ಸರ ಹರಿದುಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ಮಹಿಳೆ ವಿಜಯಮ್ಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಿಂದಿನಿಂದ ಬಂದು ಅವರಲ್ಲಿ ಒಬ್ಬ ವಾಹನದಿಂದ ಇಳಿದು, ಆಕೆಯನ್ನು ಹಿಡಿದು ಬಲವಂತವಾಗಿ ನೆಲಕ್ಕೆ ಇಳಿಸಿ, ಆಕೆಯ ಮಂಗಳಸೂತ್ರವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಇನ್ನೂಸಿಸಿಟಿವಿ ದೃಶ್ಯಾವಳಿಯಲ್ಲಿ ಮಹಿಳೆ ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು, ಇಬ್ಬರು ಪುರುಷರು ಸ್ಕೂಟರ್‌ನಲ್ಲಿ ಆಕೆಯ ಬಳಿಗೆ ಬಂದಿದ್ದು, ಒಬ್ಬ ವ್ಯಕ್ತಿ ಸ್ಕೂಟರ್ನಿಂದ ಇಳಿದು ಮಹಿಳೆಯನ್ನು ಹಿಂದಿನಿಂದ ಹಿಡಿದು ನೆಲಕ್ಕೆ ಕೆಡವುತ್ತಾನೆ.
ಈ ವೇಳೆ ಮಹಿಳೆ ತನ್ನನ್ನು ತಾನು ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದ ಕಿರುಚಾಟ ನಡೆಸಿದ್ದಾಳೆ. ಈ ವೇಳೆ ಬೀದಿ ನಾಯಿಯೊಂದು ದಾಳಿಕೋರನ ಕಡೆಗೆ ಧಾವಿಸಿ ಬಂದು ತಡೆಯಲು ಪ್ರಯತ್ನಿಸಿದೆ. ಆದರೆ ಸರಗಳ್ಳತವನ್ನು ತಡೆದಿಲ್ಲ. ಬಳಿಕ ಆರೋಪಿ ಸರವನ್ನು ಹರಿದುಕೊಂಡು ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.
ದೊಡ್ಡಬಿದಿರುಕಲ್ಲು ವ್ಯಾಪ್ತಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಮತ್ತು ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಕದ್ದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ (ಏಜೆನ್ಸೀಸ್).