- ಸರ್ಕಾರಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ಕಾರ್ಯಾಗಾರ
- ಕೆಇಎ ವತಿಯಿಂದ ತರಬೇತಿ ಪಡೆದ ನುರಿತ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದು, ಆಕಾಂಕ್ಷಿತ ಅಭ್ಯರ್ಥಿಗಳಲ್ಲಿ ಜಾಗೃತಿ
- ಸುಮಾರು 13 ಸಾವಿರ ಮಂದಿ ಮೊದಲ ದಿನದ ಮಂಥನದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 10 ಸಾವಿರ ಮಂದಿ ಭಾಗವಹಿಸಿದ್ದರು.
ಬೆಂಗಳೂರು: ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ಮಾಹಿತಿ ನೀಡುವ ಸಲುವಾಗಿ ರಾಜ್ಯದ 64 ಕಾಲೇಜುಗಳಲ್ಲಿ ಆರಂಭವಾದ ಸಿಇಟಿ ಸೀಟು ಹಂಚಿಕೆ ಮಂಥನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಭಾಗವಹಿಸಿ ಅನುಮಾನಗಳನ್ನು ದೂರ ಮಾಡಿಕೊಂಡರು.
ಸರ್ಕಾರಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ಕಾರ್ಯಾಗಾರ ನಡೆಯಿತು. ಕೆಇಎ ವತಿಯಿಂದ ತರಬೇತಿ ಪಡೆದ ನುರಿತ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದು, ಆಕಾಂಕ್ಷಿತ ಅಭ್ಯರ್ಥಿಗಳಲ್ಲಿ ಜಾಗೃತಿ ಮೂಡಿಸಿದರು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.
ಸುಮಾರು 13 ಸಾವಿರ ಮಂದಿ ಮೊದಲ ದಿನದ ಮಂಥನದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 10 ಸಾವಿರ ಮಂದಿ ಭಾಗವಹಿಸಿದ್ದರು. ಮೇ 30ರವರೆಗೆ (ಮೇ 28 ಹೊರತುಪಡಿಸಿ) ಎಲ್ಲ ದಿನ ಎರಡು ಅವಧಿಯಲ್ಲಿ ಕಾರ್ಯಾಗಾರ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಪಾಲಕರ ಜತೆ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ಕೆಇಎ ಉಪಕ್ರಮಕ್ಕೆ ಮೆಚ್ಚುಗೆ
ಕೌನ್ಸೆಲಿಂಗ್ ಪ್ರಕ್ರಿಯೆ, ಆಪ್ಷನ್ಸ್ ದಾಖಲು, ಛಾಯ್ಸ್ ಆಯ್ಕೆ, ಹೀಗೆ ನಾನಾ ರೀತಿಯ ಪ್ರಕ್ರಿಯೆಗಳ ಬಗ್ಗೆ ಇದ್ದ ಅನುಮಾನಗಳಿಗೆ ಮಂಥನ ಕಾರ್ಯಕ್ರಮದಲ್ಲಿ ಪರಿಹಾರ ಸಿಕ್ಕಿತು. ಇದೊಂದು ಒಳ್ಳೆಯ ಕೆಲಸ ಎಂದು ಆಕಾಂಕ್ಷಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.