ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ಪ್ರತಿ ಕಾಲೇಜಿನಿಂದಲೂ ಮೂರು- ನಾಲ್ಕು ಮಂದಿ ಉಪನ್ಯಾಸಕರನ್ನು ಆಹ್ವಾನಿಸಿ, ಸೀಟು ಹಂಚಿಕೆ ಬಗ್ಗೆ ಇಡೀ ದಿನ ತರಬೇತಿ
- ತರಬೇತಿ ಪಡೆದ ಈ ಉಪನ್ಯಾಸಕರು ತಮ್ಮ ಕಾಲೇಜುಗಳಲ್ಲಿ ನಡೆಯುವ ಸೀಟು ಹಂಚಿಕೆ ಮಂಥನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ
- ಕಳೆದ ಬಾರಿ ಕೇವಲ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆದ ಈ ಮಂಥನ ಕಾರ್ಯಾಗಾರ ಈ ವರ್ಷ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಗೂ ವಿಸ್ತರಿಸಲಾಗಿದೆ
ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಸಂಬಂಧ ಜಾಗೃತಿ ಮೂಡಿಸಲು 2026ನೇ ಸಾಲಿನ ಸಿಇಟಿ ಸೀಟು ಹಂಚಿಕೆ ಮಂಥನ ಕಾರ್ಯಕ್ರಮವನ್ನು ಇದೇ 25ರಿಂದ 30ರವರೆಗೆ ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಪ್ರಕಟಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಲ್ಲಿನ ಕಚೇರಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಪ್ರತಿನಿಧಿಗಳಿಗೆ ಶನಿವಾರ ಆಯೋಜಿಸಿದ್ದ ಸೀಟು ಹಂಚಿಕೆ ಮಂಥನ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರತಿ ಕಾಲೇಜಿನಿಂದಲೂ ಮೂರು- ನಾಲ್ಕು ಮಂದಿ ಉಪನ್ಯಾಸಕರನ್ನು ಆಹ್ವಾನಿಸಿ, ಸೀಟು ಹಂಚಿಕೆ ಬಗ್ಗೆ ಇಡೀ ದಿನ ತರಬೇತಿ ನೀಡಲಾಯಿತು. 170ಕ್ಕೂ ಹೆಚ್ಚು ಉಪನ್ಯಾಸಕರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ತರಬೇತಿ ಪಡೆದ ಈ ಉಪನ್ಯಾಸಕರು ತಮ್ಮ ಕಾಲೇಜುಗಳಲ್ಲಿ ನಡೆಯುವ ಸೀಟು ಹಂಚಿಕೆ ಮಂಥನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಿದ್ದಾರೆ. ಕಳೆದ ಬಾರಿ ಕೇವಲ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆದ ಈ ಮಂಥನ ಕಾರ್ಯಾಗಾರ ಈ ವರ್ಷ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿಗೂ ವಿಸ್ತರಿಸಲಾಗಿದೆ.