ಸಿಇಟಿ ಪರೀಕ್ಷೆ ಕುರಿತು ಕೆಇಎ ಸಿದ್ಧತೆ
- ಏ.22ರಂದು ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ನಗರಗಳ ಒಟ್ಟು ಐದು ಕೇಂದ್ರಗಳಲ್ಲಿ ನಡೆಯಲಿದೆ.
- ಏ.23ರಂದು ಭೌತಶಾಸ ಮತ್ತು ರಸಾಯನಶಾಸ, ಏ.24ರಂದು ಗಣಿತ ಮತ್ತು ಜೀವಶಾಸ ವಿಷಯಗಳ ಪರೀಕ್ಷೆಗಳು ನಡೆಯಲಿವೆ
- 3.30 ಲಕ್ಷ ಅಭ್ಯರ್ಥಿಗಳು, 745 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ
ಬೆಂಗಳೂರು: ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏ.23 ಮತ್ತು 24ರಂದು ನಡೆಯಲಿದ್ದು, ಪರೀಕ್ಷೆ ಕುರಿತು ಕೆಇಎ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಏ.22ರಂದು ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ನಗರಗಳ ಒಟ್ಟು ಐದು ಕೇಂದ್ರಗಳಲ್ಲಿ ನಡೆಯಲಿದೆ. ಏ.23ರಂದು ಭೌತಶಾಸ ಮತ್ತು ರಸಾಯನಶಾಸ, ಏ.24ರಂದು ಗಣಿತ ಮತ್ತು ಜೀವಶಾಸ ವಿಷಯಗಳ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
3.30 ಲಕ್ಷ ಅಭ್ಯರ್ಥಿಗಳು, 745 ಪರೀಕ್ಷಾ ಕೇಂದ್ರ:
ಬೆಂಗಳೂರಿನ 163 ಸೇರಿ ರಾಜ್ಯಾದ್ಯಂ 745 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಲ್ಲ ಕೇಂದ್ರಗಳಲ್ಲಿಯೂ ವೆಬ್‌ಕಾಸ್ಟಿಂಗ್ ವ್ಯವಸ್ಥೆ ರೂಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಮೇಲುಸ್ತುವಾರಿ ನಡೆಸಲಿದ್ದಾರೆ.
1,44,380 ಬಾಲಕರು, 1,86,099 ಬಾಲಕಿಯರು ಸೇರಿ ಒಟ್ಟು 3,30,479 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಪ್ರತಿ ಕೇಂದ್ರಗಳಲ್ಲಿಯೂ ತಲಾ ಒಬ್ಬ ಉಪ ಮುಖ್ಯ ಅಧೀಕ್ಷ, ವಸ್ತ್ರ ಸಂಹಿತಾಧಿಕಾರಿಯನ್ನು ನೇಮಿಸಲಾಗಿದೆ. 12,665 ಪರೀಕ್ಷಾ ಕೇಂದ್ರದ ಸಿಬ್ಬಂದಿ, 15,265 ಸಿಸಿಟಿವಿ ಕ್ಯಾಮರಾ, 13,770 ಕೊಠಡಿ ಮೇಲ್ವಿಚಾರಕರು, 3,304 ಫ್ರಿಸ್ಕಿಂಗ್ ದಳ ಮತ್ತು 3,304 ಮುಖ ಚಹರೆ ದಳವನ್ನು ನೇಮಿಸಲಾಗಿದೆ.
ಬೆಂಗಳೂರಿನಲ್ಲಿಯೇ 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರ ಕಮಾಂಡ್ ಸೆಂಟರ್ ಅನ್ನು ಕೆಇಎ ಕಚೇರಿಯಲ್ಲಿ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟು 970 ವಿಶೇಷ ಚೇತನ ಮಕ್ಕಳು ಸಿಇಟಿ ಬರೆಯುತ್ತಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶ್ರವಣ ಸಾಧನ ಬಳಸಿಕೊಂಡು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿರುವ ಕಾರಣ ಅಂತಹವರು ಎರಡು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಬರಬೇಕೆಂದು ಅವರು ಸಲಹೆ ನೀಡಿದ್ದಾರೆ.
ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಸಿದ್ದು, ಅಕ್ರಮಗಳಿಗೆ ಅವಕಾಶ ಇಲ್ಲದಂತೆ ನಿಗಾ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಎರಡು ಗಂಟೆ ಮುಂಚೆ ಬನ್ನಿ
ನಕಲಿ ಅಭ್ಯರ್ಥಿಗಳಿಗೆ ಸಂಪೂರ್ಣ ಕಡಿವಾಣ ಹಾಕುವ ಉದ್ದೇಶದಿಂದ ಅಭ್ಯರ್ಥಿಯ ಮುಖ ಚಹರೆ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲನೆ ಮಾಡಲಾಗುತ್ತದೆ. ಈ ಕಾರಣದಿಂದ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ ತಿಳಿಸಲಾಗಿದೆ.
ಅರ್ಧ ತೋಲಿನ ಬಟ್ಟೆ ಧರಿಸಿ
ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ಇಲ್ಲದಿರುವುದನ್ನು ಧರಿಸಿದರೆ ಉತ್ತಮ. ಪುರುಷರು, ಜೇಬು ಇಲ್ಲದ/ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು. ಕುರ್ತಾ ಪೈಜಾಮ/ಜೀನ್ಸ್ ಪ್ಯಾಂಟ್‌ಗೆ ಅವಕಾಶ ಇರುವುದಿಲ್ಲ. ಶೂ ನಿಷೇಧಿಸಲಾಗಿದೆ.
ಎಲ್ಲ ಬಗೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಇಎ ವೆಬ್ ಸೈಟ್‌ನಲ್ಲಿರುವ ವಸ್ತ್ರ ಸಂಹಿತೆಯ ವಿವರಗಳನ್ನು ಓದಿಕೊಳ್ಳುವಂತೆ ತಿಳಿಸಲಾಗಿದೆ.
ಒಎಂಆರ್ ಭರ್ತಿ ವೇಳೆ ಎಚ್ಚರ ವಹಿಸಿ
ಒಎಂಆರ್ ಶೀಟ್‌ನಲ್ಲಿ ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು ಯಾವುದೇ ತಪ್ಪಿಲ್ಲದೆ ದಾಖಲಿಸಬೇಕು. ಹೆಸರು, ಸಿಇಟಿ ಸಂಖ್ಯೆ, ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ, ಸಂಬಂಧಿಸಿದ ವೃತ್ತಗಳನ್ನು ಶೇಡ್ ಮಾಡಬೇಕು. ಹಿಂದಿನ ವರ್ಷಗಳಲ್ಲಿ ಈ ಮಾಹಿತಿ ಕೂಡ ಸರಿಯಾಗಿ ಭರ್ತಿ ಮಾಡದಿರುವ ಕಾರಣ ಫಲಿತಾಂಶ ಪ್ರಕಟಣೆಗೂ ಸಮಸ್ಯೆ ಆಗಿತ್ತು. ಹೀಗಾಗಿ ಅಭ್ಯರ್ಥಿಗಳು ಎಚ್ಚರ ವಹಿಸಬೇಕು. ಅಭ್ಯಾಸ ಮಾಡಲಿ ಎನ್ನುವ ಕಾರಣಕ್ಕೆ ಕರಡು ಒಎಂಆರ್ ಶೀಟ್ ಅನ್ನು ಪ್ರವೇಶ ಪತ್ರದ ಜತೆ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅದನ್ನು ಅಭ್ಯಾಸ ಮಾಡುವುದರ ಮೂಲಕ ಅನಗತ್ಯ ತಪ್ಪುಗಳನ್ನು ತಡೆಯಬೇಕು ಎಂದು ಪ್ರಸನ್ನ ಸಲಹೆ ನೀಡಿದ್ದಾರೆ.