ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ
- ವಿವಿಧ ಕೋರ್ಸ್‌ಗಳ ಒಟ್ಟು 1,41,872 ಸೀಟುಗಳ ಪೈಕಿ 1,22,512 ಸೀಟುಗಳನ್ನು ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿದ್ದು, 19,374 ಸೀಟು ಉಳಿದಿವೆ.
- ಒಟ್ಟು 91,724 ಇಂಜಿನಿಯರಿಂಗ್ ಸೀಟುಗಳಲ್ಲಿ 90,748 ಸೀಟು ಹಂಚಿಕೆಯಾಗಿದ್ದು, ಕೇವಲ 976 ಸೀಟು ಮಾತ್ರ ಬಾಕಿ
- ಪಶು ವೈದ್ಯಕೀಯ ಕೋರ್ಸ್‌ನಲ್ಲಿದ್ದ ಎಲ್ಲ 361 ಸೀಟುಗಳೂ ಹಂಚಿಕೆ
ಬೆಂಗಳೂರು: ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಪ್ರಕಟಿಸಿದೆ.
ವಿವಿಧ ಕೋರ್ಸ್‌ಗಳ ಒಟ್ಟು 1,41,872 ಸೀಟುಗಳ ಪೈಕಿ 1,22,512 ಸೀಟುಗಳನ್ನು ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿದ್ದು, 19,374 ಸೀಟು ಉಳಿದಿವೆ. ಒಟ್ಟು 91,724 ಇಂಜಿನಿಯರಿಂಗ್ ಸೀಟುಗಳಲ್ಲಿ 90,748 ಸೀಟು ಹಂಚಿಕೆಯಾಗಿದ್ದು, ಕೇವಲ 976 ಸೀಟು ಮಾತ್ರ ಬಾಕಿ ಉಳಿದಿವೆ. ಪಶು ವೈದ್ಯಕೀಯ ಕೋರ್ಸ್‌ನಲ್ಲಿದ್ದ ಎಲ್ಲ 361 ಸೀಟುಗಳೂ ಹಂಚಿಕೆಯಾಗಿವೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಫಾರ್ಮಸಿ ಕೋರ್ಸ್‌ಗಳನ್ನು ಹೊರತುಪಡಿಸಿ ಇತರ ಕೋರ್ಸ್‌ಗಳ ಸೀಟು ಹಂಚಿಕೆ ಮಾಡಲಾಗಿದೆ. ಸೀಟು ಸಿಕ್ಕಿರುವ ಅಭ್ಯರ್ಥಿಗಳಿಗೆ ಚಾಯ್ಸ್ಗಳ ಆಯ್ಕೆ, ಶುಲ್ಕ ಪಾವತಿ ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸಂಬಂಧ ವೇಳಾಪಟ್ಟಿ ಪ್ರಕಟಿಸಿದ್ದು, ಜು.24ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಚಾಯ್ಸ್ ದಾಖಲಿಗೂ ಒಂದೊಂದು ಕೋರ್ಸ್‌ಗೆ ಒಂದೊಂದು ದಿನಾಂಕಗಳನ್ನು ನೀಡಿದ್ದು, ಆ ಪ್ರಕಾರ ಮಾಡಬೇಕು. ಇಂಜಿನಿಯರಿಂಗ್ ಪ್ರವೇಶ ಬಯಸುವ ಅಭ್ಯರ್ಥಿಗಳು ಜು.16ರಿಂದ, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಕೋರ್ಸ್ ಅಭ್ಯರ್ಥಿಗಳು ಜು.17ರಿಂದ ಚಾಯ್ಸ್ ದಾಖಲಿಸಬಹುದು. ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ ಮತ್ತು ಎಎಚ್‌ಎಸ್ ಕೋರ್ಸ್ ಓದುವವರು ಜು.18 ಹಾಗೂ ಬಿಎಸ್‌ಸಿ ನರ್ಸಿಂಗ್ ಅಭ್ಯರ್ಥಿಗಳು ಜು.19ರಿಂದ ಚಾಯ್ಸ್ ದಾಖಲಿಸಬಹುದು ಎಂದು ಅವರು ತಿಳಿಸಿದ್ದಾರೆ.
ಅರ್ಹರ ಪಟ್ಟಿ ಬರುವುದು ಕ್ರೀಡಾ ಇಲಾಖೆಯಿಂದ ತಡ ಆಗಿರುವ ಕಾರಣ ಕ್ರೀಡಾ ಕೋಟಾದ ಸೀಟುಗಳನ್ನು ಮೊದಲ ಸುತ್ತಿನಲ್ಲಿ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಎರಡನೇ ಸುತ್ತಿನಲ್ಲಿ ಆ ಸೀಟುಗಳನ್ನು ಹಂಚಿಕೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ವೈದ್ಯಕೀಯ: ಚಾಯ್ಸ್- 2ಗೆ ಸಲಹೆ
ವೈದ್ಯಕೀಯ ಕೋರ್ಸ್‌ಗಳ ಪ್ರವೇಶದ ನಿರೀಕ್ಷೆಯಲ್ಲಿ ಇರುವವರು ಮೊದಲ ಸುತ್ತಿನಲ್ಲಿ ಬೇರೆ ಯಾವುದೇ ಕೋರ್ಸ್‌ನಲ್ಲಿ ಸೀಟು ಹಂಚಿಕೆಯಾಗಿದ್ದರೂ ಚಾಯ್ಸ್-2 ಹಾಕಿ ಎರಡನೇ ಸುತ್ತಿನವರೆಗೂ ಕಾಯಬೇಕು. ವೈದ್ಯಕೀಯ ಸೀಟ್ ಮ್ಯಾಟ್ರಿಕ್ಸ್ ಹಾಗೂ ನೀಟ್ ಫಲಿತಾಂಶ ಬಂದ ನಂತರ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ.
ಚಾಯ್ಸ ಆಯ್ಕೆ ಹೀಗಿರಲಿ
- ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿರುವ ಸೀಟು ಇಷ್ಟ ಆಗಿದ್ದರೆ ಅಂತಹವರು ಚಾಯ್ಸ-1 ಹಾಕಿ, ಶುಲ್ಕ ಪಾವತಿಸಿ, ಸೀಟು ಖಚಿತತೆಯ ಚೀಟಿ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬಹುದು.
- ಒಂದು ವೇಳೆ ಸಿಕ್ಕಿರುವ ಸೀಟು ಪರವಾಗಿಲ್ಲ, ಇನ್ನೂ ಉತ್ತಮ ಕಾಲೇಜಿನ ನಿರೀಕ್ಷೆ ಇದ್ದಲ್ಲಿ ಅಂತಹವರು ಚಾಯ್ಸ-2 ಕೊಡಿ.
- ಸಿಕ್ಕಿರುವ ಸೀಟು ಬೇಡವೇ ಬೇಡ ಅನ್ನುವವರು ಚಾಯ್ಸ್- 3 ಆಯ್ಕೆ ಮಾಡಿಕೊಳ್ಳಬಹುದು.
- ಸಿಕ್ಕಿರುವ ಸೀಟು ಬೇಡ ಎನ್ನುವ ಹಾಗೂ ಇಡೀ ಪ್ರಕ್ರಿಯೆಯಿಂದ ಹೊರ ನಡೆಯುವುದಾಗಿ ಹೇಳುವವರು ಚಾಯ್ಸ್-4 ಹಾಕಬಹುದು
ಚಾಯ್ಸ್ ಬದಲಾವಣೆಗೂ ಅವಕಾಶ
ಅಭ್ಯರ್ಥಿಗಳಿಗೆ ನಿಗದಿತ ಅವಧಿಯೊಳಗೆ ಚಾಯ್ಸ್ ಬದಲಾವಣೆಗೂ ಅವಕಾಶ ನೀಡಲಾಗಿದೆ.
ಉದಾಹರಣೆಗೆ ಚಾಯ್ಸ್ - 2 ಹಾಕಿ ನಂತರ ಚಾಯ್ಸ್- 1 ಹಾಕಬಹುದು. ಚಾಯ್ಸ್-4 ಹಾಕಿ ಇಡೀ ಪ್ರಕ್ರಿಯೆಯಿಂದ ಹೊರ ನಡೆದವರು ಕೂಡ ಪುನಃ ವಾಪಸ್ ಬಂದು ಚಾಯ್ಸ್ ಬದಲಿಸಿಕೊಳ್ಳಬಹುದು. ಆದರೆ, ಚಾಯ್ಸ್- 1 ಹಾಕಿ ಶುಲ್ಕ ಪಾವತಿಸಿ, ಕಾಲೇಜಿಗೆ ಪ್ರವೇಶ ಪಡೆದವರು ತಮ್ಮ ಚಾಯ್ಸ್ ಬದಲಿಸಿಕೊಳ್ಳಲು ಅವಕಾಶ ಇರುವುದಿಲ್ಲ.
ಹಂಚಿಕೆಯಾದ ಕೋರ್ಸ್‌ವಾರು ಪಟ್ಟಿ
ಕೋರ್ಸ್ ಒಟ್ಟು ಸೀಟು ಹಂಚಿಕೆಯಾದ ಸೀಟು
ಇಂಜಿನಿಯರಿಂಗ್ 91,724 90,748