ಸಿಇಟಿ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ
- ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳು ಬರುವ ಮುನ್ನ ಸ್ಲಾಟ್ ಬುಕ್ ಮಾಡಿ, ಮೇ 7ರಿಂದ ಸ್ಲಾಟ್ ಬುಕ್ ಲಿಂಕ್ ತೆರೆದುಕೊಳ್ಳಲಿದೆ
- ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳೇ ಬರಬೇಕು. ಅವರ ಪರವಾಗಿ ಬೇರೆಯವರು ಬರುವಂತಿಲ್ಲ.
- ಪರಿಶೀಲನೆ ವೇಳೆ ಸಲ್ಲಿಸಬೇಕಾದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಇ-ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ
ಬೆಂಗಳೂರು: ಸಿಇಟಿಯಲ್ಲಿ ಮೀಸಲಾತಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಮೇ 11ರಿಂದ 22ರವರೆಗೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ನಡೆಯುವ ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳು ಬರುವ ಮುನ್ನ ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್‌ನಲ್ಲಿ ಸ್ಲಾಟ್ ಬುಕ್ ಮಾಡಿಕೊಂಡು ಬರಬೇಕು. ಮೇ 7ರಿಂದ ಸ್ಲಾಟ್ ಬುಕ್ ಲಿಂಕ್ ತೆರೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳೇ ಬರಬೇಕು. ಅವರ ಪರವಾಗಿ ಬೇರೆಯವರು ಬರುವಂತಿಲ್ಲ. ಪರಿಶೀಲನೆ ವೇಳೆ ಸಲ್ಲಿಸಬೇಕಾದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಇ-ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಿಇಟಿ-2026 ಪ್ರವೇಶ ಪತ್ರ ಮತ್ತು ಅರ್ಜಿ, ಗುರುತಿನ ಚೀಟಿ (ಆಧಾರ್ ಕಾರ್ಡ್) 10 ಮತ್ತು 12ನೇ ತರಗತಿಯ ಅಂಕಪಟ್ಟಿ, ವ್ಯಾಸಂಗ ಪ್ರಮಾಣ ಪತ್ರ, ಪಾಲಕರ ಪ್ರಮಾಣ ಪತ್ರಗಳು, ಅರ್ಹತಾ ಖಂಡಿಕೆಗೆ ಅನುಗುಣವಾಗಿ ಅವಶ್ಯಕವಿರುವ ಇತರೆ ಎಲ್ಲ ಮೂಲ ದಾಖಲೆ ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಬರಬೇಕು ಎಂದು ಅವರು ತಿಳಿಸಿದ್ದಾರೆ.