ಡಾ.ಶರಣಪ್ರಕಾಶ ಪಾಟೀಲ್​ 
ರಾಜ್ಯ

ಸಿಇಟಿ ಕೌನ್ಸೆಲಿಂಗ್​ ಅಬಾಧಿತ

ಪ್ರಮುಖ ಮುಖ್ಯಾಂಶಗಳು

  • ರಾಯಚೂರಿನಲ್ಲಿ ಏಮ್ಸ್​ ಸ್ಥಾಪನೆಗೆ ಆಗ್ರಹ
ಕಲಬುರಗಿ: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಕೌನ್ಸೆಲಿಂಗ್​ ಎಂದಿನಂತೆ ನಡೆಯಲಿದ್ದು, ಇದಕ್ಕೆ ಯಾವುದೇ ಸಮಸ್ಯೆ ಎದುರಾಗದು ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.
ಮಂಗಳವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಶರಣಪ್ರಕಾಶ್​, ನೀಟ್​ ಮರುಪರೀಕ್ಷೆ, ಆ ನಂತರ ಫಲಿತಾಂಶ, ಕೌನ್ಸೆಲಿಂಗ್​ ಹೀಗೆ ಎಲ್ಲ ಪ್ರಕ್ರಿಯೆ ವಿಳಂಬವಾಗಲಿದೆ. ಹೀಗಾಗಿ ನೀಟ್​ಗಾಗಿ ಕಾಯದೇ ಸಿಇಟಿ ಕೌನ್ಸೆಲಿಂಗ್​ ಪ್ರಕ್ರಿಯೆ ಪೂರ್ಣಗೊಳಿಸುಂತೆ ಸಿಇಟಿ ಸೆಲ್​ಗೆ ಸೂಚಿಸಲಾಗಿದೆ ಎಂದರು.
ಸಿಇಟಿ ಕೌನ್ಸೆಲಿಂಗ್​ನಲ್ಲಿ ಆಯ್ಕೆಯಾಗಿ ಯಾವುದೇ ಕಾಲೇಜಿನಲ್ಲಿ ಇಂಜಿನಿಯರಿಂಗ್​ ಪ್ರವೇಶ ಪಡೆದ ಅಭ್ಯರ್ಥಿಗೆ ಆ ನಂತರ ಮೆಡಿಕಲ್​ ಸೀಟು ಸಿಕ್ಕರೆ ಆ ಅಭ್ಯರ್ಥಿಗೆ ಶುಲ್ಕ ಮರುಪಾವತಿ ಮಾಡುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗುವುದು. ಈ ಕುರಿತಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ನೀಟ್​ ಮರು ಪರೀಕ್ಷೆಗೆ ಹೆದರಿ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮೊರೆ ಹೋಗಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮಾನವೀಯತೆ ಎಂಬುದಿದ್ದರೆ ಈ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು. ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಗೊಂದಲ, ತಪ್ಪು ನಿರ್ಧಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
ಈ ಸಾಲಿನಲ್ಲಿ ಯುಜಿ 550 ಸೀಟು, ಪಿಜಿ 572 ಸೀಟು, ಕಳೆದ ವರ್ಷ ಯುಜಿ 450 ಸೀಟು, ಪಿಜಿ 422 ಹೆಚ್ಚುವರಿ ಸೀಟುಗಳು ದೊರಕಿವೆ ಎಂದರು.
ರಾಯಚೂರಿನಲ್ಲಿ ಏಮ್ಸ್​ ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ದೆಹಲಿಗೆ ತೆರಳಿ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮತ್ತೊಂದು ಪ್ರಸ್ತಾವನೆ ಸಲ್ಲಿಸಿ, ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.