ಕೃಷಿ ಸಚಿವ ನರೇಂದ್ರಸ್ವಾಮಿ ಮನವಿಗೆ ಕೇಂದ್ರ ಸ್ಪಂದನೆ 
ರಾಜ್ಯ

ಕೃಷಿ ಸಚಿವ ನರೇಂದ್ರಸ್ವಾಮಿ ಮನವಿಗೆ ಕೇಂದ್ರ ಸ್ಪಂದನೆ! ರಾಜ್ಯದ ಬರಪೀಡಿತ ಜಿಲ್ಲೆ ಭೇಟಿಗೆ ಶಿವರಾಜ್ ಸಿಂಗ್ ಚೌಹಣ್​ ಅಸ್ತು

ಪ್ರಮುಖ ಮುಖ್ಯಾಂಶಗಳು

  • ಬರದ ಹಿನ್ನೆಲೆಯಲ್ಲಿ ಉಂಟಾಗಿರುವ ರಾಜ್ಯದ ಕೃಷಿ ಸಮಸ್ಯೆಗಳು ಹಾಗೂ ವಿಮೆ ಅವಧಿ ವಿಸ್ತರಣೆ
  • ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ದೆಹಲಿಗೆ ಭೇಟಿ
  • ನರೇಂದ್ರಸ್ವಾಮಿ ಅವರು ಮನವಿಗೆ ಕಡೆಗೂ ಕೇಂದ್ರ ಸರ್ಕಾರ ಸ್ಪಂದನೆ
ಬೆಂಗಳೂರು: ನೂತನ ಕೃಷಿ ಸಚಿವ ನರೇಂದ್ರಸ್ವಾಮಿ ಅವರು ಬರದ ಹಿನ್ನೆಲೆಯಲ್ಲಿ ಉಂಟಾಗಿರುವ ರಾಜ್ಯದ ಕೃಷಿ ಸಮಸ್ಯೆಗಳು ಹಾಗೂ ವಿಮೆ ಅವಧಿ ವಿಸ್ತರಣೆ ಬಗ್ಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿದರು‌.
ನರೇಂದ್ರಸ್ವಾಮಿ ಅವರು ಮನವಿಗೆ ಕಡೆಗೂ ಕೇಂದ್ರ ಸರ್ಕಾರ ಸ್ಪಂದಿಸಿದೆ. ಸಚಿವರ ಮನವಿ ಮೇರೆಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯಕ್ಕೆ ಬಂದು ಯಾವುದಾದರೊಂದು ಬರಪೀಡಿತ ಜಿಲ್ಲೆಗೆ ಭೇಟಿ ಕೊಡುವುದಾಗಿ ಕೇಂದ್ರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದ್ದಾರೆ.
ನರೇಂದ್ರಸ್ವಾಮಿ ಅವರು ದೆಹಲಿಗೆ ತೆರಳಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್​ರನ್ನು ಭೇಟಿಯಾಗಿ ರಾಜ್ಯದ ಬರದ ಹಿನ್ನೆಲೆಯಲ್ಲಿ ಉಂಟಾಗಿರುವ ರಾಜ್ಯದ ಕೃಷಿ ಸಮಸ್ಯೆಗಳು ಹಾಗೂ ಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಆಗಸ್ಟ್ ಕೊನೆಯವರೆಗೆ ಅವಧಿ ವಿಸ್ತರಣೆ ಮಾಡುವ ಬಗ್ಗೆ ಸಮಾಲೋಚನೆ ನಡೆಸಿದರು.
ಪ್ರಧಾನ ಮಂತ್ರಿ ಫಸಲ್ ಭೀಮಾ ವಿಮಾ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಅವಧಿ ವಿಸ್ತರಿಸುವಂತೆ ಸಿಎಂ ಡಿಕೆ ಶಿವಕುಮಾರ್, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವುದನ್ನು ನರೇಂದ್ರಸ್ವಾಮಿ ಅವರು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದರು. ಸಮಾಲೋಚನೆ ವೇಳೆ ಶಿವರಾಜ್ ಸಿಂಗ್ ಕರ್ನಾಟಕಕ್ಕೆ ಭೇಟಿ ಕೊಡುವುದು ಮಾತ್ರವಲ್ಲದೆ, ಕರ್ನಾಟಕದಲ್ಲಿ ಮಳೆಯ ಅಭಾವದಿಂದಾಗಿ ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ಸ್ಪಂದಿಸುವುದಾಗಿಯೂ ಹೇಳಿದ್ದಾರೆ.
ಈಗಾಗಲೇ ಕೃಷಿ ವಿಮಾ ಅವಧಿ ಮುಕ್ತಾಯ ಆಗುತ್ತಿರುವುದರಿಂದ ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ 666 ಕೃಷಿ ವಿಮಾ ಘಟಕಗಳಲ್ಲಿ ಮಧ್ಯಂತರ ಪರಿಹಾರ ಕೊಡಲು ಆದೇಶ ನೀಡಲಾಗಿದೆ. ಕೇಂದ್ರ ಪುರಸ್ಕೃತ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ. ಜತೆಗೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯದ ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ನರೇಂದ್ರಸ್ವಾಮಿ ತಿಳಿಸಿದ್ದಾರೆ.

ಮಳೆಯೇ ಕಾಪಾಡಬೇಕು

ತಮಿಳುನಾಡಿಗೆ ನೀರು ಹರಿಸುವುದರ ಜತೆಗೆ ರೈತರ ಬೆಳೆಗೆ ನೀರು ಬಿಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನರೇಂದ್ರಸ್ವಾಮಿ, ರಾಜ್ಯದ ಕೃಷಿ ಚಟುವಟಿಕೆಗಳಿಗೆ ನೀರು ಬಿಡುವ ವಿಚಾರದಲ್ಲಿ ಯಾವುದನ್ನು ಮುಚ್ಚಿಡುವ ಅಗತ್ಯವಿಲ್ಲ. ಕೆಆರ್​ಎಸ್ ಜಲಾಶಯದಲ್ಲಿ ಕೇವಲ 109 ಅಡಿ ನೀರಿದೆ. ಇದು ರಾಜ್ಯದ ರೈತರು ಒಂದು ಬೆಳೆ ಬೆಳೆಯುವುದಕ್ಕೆ ಸಾಲುವುದಿಲ್ಲ. ಇದರ ಮಧ್ಯೆ ಸುಪ್ರೀಂ ಕೋರ್ಟ್ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದು ತಮಿಳುನಾಡಿಗೆ ನೀರು ಬಿಡುವಂತೆ ಸೂಚಿಸಿದೆ. ಈ ಸಮಸ್ಯೆಗೆ ಈಗ ಮಳೆಯೇ ಪರಿಹಾರ ಎಂದರು.