ಮಾವು 
ರಾಜ್ಯ

ಮಾವು ಬೆಳೆಗಾರರ ನೆರವಿಗೆ ಬಂದ ಕೇಂದ್ರ

ಬೆಂಗಳೂರು: ಬೆಲೆ ಕುಸಿತದಿಂದ ಕಂಗೆಟ್ಟಿರುವ ರಾಜ್ಯ ಮಾವು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿ 1.30 ಲಕ್ಷ ಮೆಟ್ರಿಕ್ ಟನ್ ಮಾವಿಗೆ ಪ್ರತಿ ಕ್ವಿಂಟಲ್‌ಗೆ 1,750 ರೂ. ಆರ್ಥಿಕ ನೆರವನ್ನು ಘೋಷಿಸಿದೆ. ಇದರಿಂದ ರಾಜ್ಯದ ಬೆಳೆಗಾರರು ತುಸು ನಿರಾಳರಾಗುವಂತಾಗಿದೆ.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಮಾವು ಬೆಳೆಗಾರರ ಸಂಕಷ್ಟದ ಬಗ್ಗೆ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್‌ಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದರು. ಜತೆಗೆ ಚೌಹಾಣ್ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿ ಬೆಲೆ ಕೊರತೆ ಪಾವತಿ ಯೋಜನೆ(ಪಿಡಿಪಿಎಸ್)ಯಡಿ ನೆರವಾಗುವಂತೆ ಮನವಿ ಮಾಡಿದ್ದರು.
ಈ ಇಬ್ಬರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು, ರಾಜ್ಯ ಮಾವು ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವಲ್ಲಿ ತ್ವರಿತ ಕ್ರಮ ಕೈಗೊಂಡಿದ್ದು, ಆರ್ಥಿಕ ನೆರವು ನೀಡಲು ಅನುಮೋದನೆ ನೀಡಿದೆ. ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ(ಎಂಐಎಸ್) ಬೆಲೆ ಕೊರತೆ ಪಾವತಿ(ಪಿಡಿಪಿ) ಅನುಷ್ಠಾನಕ್ಕೆ ಕ್ರಮ ಕೈಗೊಂಡಿದೆ. ಎಂಐಎಸ್ ಮಾರ್ಗಸೂಚಿಯಂತೆ 2026-27ರ ಮಾರುಕಟ್ಟೆ ಹಂಗಾಮಿನಲ್ಲಿ ಕರ್ನಾಟಕದಲ್ಲಿ ತೋತಾಪುರಿ ಮಾವಿಗೆ ಬೆಲೆ ಕೊರತೆ ಪಾವತಿಯನ್ನು ಜಾರಿಗೆ ತರಲು ನಿರ್ದೇಶಿಸಿದೆ.
ಎಂಐಎಸ್ ಅಡಿಯಲ್ಲಿ ನೆರವು ಘೋಷಿಸಿರುವ ಕೇಂದ್ರ ಸರ್ಕಾರ, ಗರಿಷ್ಠ 1.30 ಲಕ್ಷ ಮೆಟ್ರಿಕ್ ಟನ್‌ವರೆಗೂ ಅನ್ವಯಿಸುವಂತೆ ಪ್ರತಿ ಕ್ವಿಂಟಲ್‌ಗೆ 1,750 ರೂ. ಸಹಾಯಧನ ನಿಗದಿಪಡಿಸಿದ್ದು, ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿ ಹೊರಡಿಸಿದೆ.
2026-27ರ ಹಂಗಾಮಿನಲ್ಲಿ ಒಂದು ತಿಂಗಳವರೆಗೆ ಬೆಲೆ ಕೊರತೆ ಪಾವತಿ ಅನುಷ್ಠಾನ ಜಾರಿಯಲ್ಲಿ ಇರುತ್ತದೆ. ಬೆಲೆ ಕೊರತೆ ಪಾವತಿಯಡಿ ಪ್ರಯೋಜನ ಪಡೆಯುವ ರೈತರು ತಮ್ಮ ಉತ್ಪನ್ನಗಳನ್ನು ಕರ್ನಾಟಕದ ಅಧಿಸೂಚಿತ ಎಪಿಎಂಸಿ ಮಂಡಿಗಳಲ್ಲಿ ವ್ಯಾಪಾರ ಮಾಡಬೇಕು.
ರಾಜ್ಯ ಸರ್ಕಾರ 2026-27ರ ಮಾರುಕಟ್ಟೆ ಋತುವಿಗಾಗಿ ಎಂಐಎಸ್ ಅಡಿಯಲ್ಲಿ ಬೆಲೆ ಕೊರತೆ ಪಾವತಿ ಅಡಿಯಲ್ಲಿ ತೋತಾಪುರಿ ಮಾವಿನ ವ್ಯಾಪಾರಿಗಳ ಪಟ್ಟಿ ಪ್ರಕಟಿಸಬೇಕು. ನೋಂದಾಯಿತ ರೈತರಿಗೆ ಬೆಲೆ ನಷ್ಟ ಪಾವತಿಯನ್ನು ನೇರ ಲಾಭ ವರ್ಗಾವಣೆ (ಡಿಬಿಟಿ)/ಆಧಾರ್ ಪರಿಶೀಲಿಸಿದ ಬ್ಯಾಂಕ್ ಖಾತೆ ಮೂಲಕವೇ ಭರಿಸಬೇಕು ಎಂದು ಸೂಚಿಸಲಾಗಿದೆ.
ಲಕ್ಷಾಂತರ ರೈತರಿಗೆ ಲಾಭ
ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ತುಮಕೂರು, ಮಂಡ್ಯ, ಚನ್ನರಾಯಪಟ್ಟಣ ಸೇರಿ ವಿವಿಧ ಜಿಲ್ಲೆಗಳಲ್ಲಿ ತೋತಾಪುರಿ ಬೆಳೆಯುತ್ತಿದ್ದು, ಲಕ್ಷಾಂತರ ರೈತರು ಕೇಂದ್ರದ ಆರ್ಥಿಕ ನೆರವಿನ ಪ್ರಯೋಜನ ಪಡೆಯಲಿದ್ದಾರೆ.