ದೊಡ್ಡಬಳ್ಳಾಪುರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಾರಿ ಶಕ್ತಿ ವಂದನ್​ ಅಧಿನಿಯಮ ಕುರಿತಂತೆ ಬಿಜೆಪಿ ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷೆ ಅನುರೆಡ್ಡಿ, ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಆನಂದ್​, ರಾಜ್ಯ ಕಾರ್ಯದರ್ಶಿ ನಿರ್ಮಲಮ್ಮ ಇದ್ದರು. 
ರಾಜ್ಯ

ಮಹಿಳಾ ಸಬಲೀಕರಣಕ್ಕೆ ಕೇಂದ್ರದ ಯೋಜನೆಗಳು ಸಹಕಾರಿ / DODABALLAPUR

ದೊಡ್ಡಬಳ್ಳಾಪುರ : ಕೇಂದ್ರ ಸರ್ಕಾರ ಒಂದು ದಶಕದಿಂದ ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒಂದೊಂದೇ ಹೆಜ್ಜೆಯನ್ನಿರಿಸಿಕೊಂಡು ಬರುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಅಶ್ವಿನಿ ಶಂಕರ್​ ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾರಿ ಶಕ್ತಿ ವಂದನ್​ ಅಧಿನಿಯಮದ ಅಭಿಯಾನದಲ್ಲಿ ಮಾತನಾಡಿದ ಅವರು, ನಾರಿಶಕ್ತಿ ವಂದನ್​ ಅಧಿನಿಯಮ ಸಾಕಷ್ಟು ವರ್ಷಗಳಿಂದ ಬಾಕಿ ಇತ್ತು. ಅನೇಕ ವರ್ಷಗಳಿಂದ ಮಹಿಳಾ ಮೀಸಲಾತಿ ಜಾರಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕಾಂಗ್ರೆಸ್​ ಹುನ್ನಾರದಿಂದ ಲೋಕಸಭೆಯಲ್ಲಿ ಅಂಗೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಕೆಲಸ ಮಾಡಿಕೊಂಡು ಬರುತ್ತಿದೆ. ಮಹಿಳೆಯರಿಗೆ ಸ್ವಚ್ಛ ಭಾರತ್​ ಅಭಿಯಾನ, ಬಯಲು ಶೌಚ ನಿಮೂರ್ಲನೆ, ಜನ್​ಧನ್​ ಖಾತೆ, ಮುದ್ರಾ ಯೋಜನೆ, ಬೇಟಿ ಬಚಾವೋ, ಬೇಟಿ ಪಡಾವೋ ಸೇರಿದಂತೆ ನಾನಾ ಯೋಜನೆಗಳನ್ನು ನಾರಿಯರಿಗೆ ನೀಡಿದೆ ಎಂದರು.
ಮಾತೃವಂದನಾ, ಮಾತೃ ಪೋಷಣ್​ ಯೋಜನೆಗಳ ಮೂಲಕ ಪೌಷ್ಟಿಕ ಆಹಾರ ನೀಡಿದ್ದಾರೆ. ಆರ್ಥಿಕ, ಆರೋಗ್ಯ ಕ್ಷೇತ್ರಗಳಲ್ಲೂ ಮಹಿಳೆಯರನ್ನು ಸಬಲೀಕರಣಗೊಳಿಸುವ ಕೆಲಸ ನಡೆದಿದೆ. ದೇಶದಲ್ಲಿ ಹೆಚ್ಚಿನ ಮತದಾನವನ್ನು ಮಹಿಳೆಯರು ಮಾಡುತ್ತಿದ್ದಾರೆ. ಮಹಿಳೆಯರು ಕೇವಲ ಫಲಾನುಭವಿಗಳಾಗಬಾರದು, ಯೋಜನೆಗಳನ್ನು ರೂಪಿಸುವ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂಬ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪದೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದರು.