ಪ್ರಶಸ್ತಿ ವಿಜೇತರು  
ರಾಜ್ಯ

ರಾಜ್ಯದ 10 ಸಾಧಕರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ; ದೇಶಾದ್ಯಂತ ವಿವಿಧ ರಂಗಗಳ 108 ಕಲಾವಿದರಿಗೆ ಪುರಸ್ಕಾರ

ಪ್ರಮುಖ ಮುಖ್ಯಾಂಶಗಳು

  • 2024, 2025ನೇ ಸಾಲಿನ ಪ್ರಶಸ್ತಿ ಪ್ರಕಟ
  • ದೇಶಾದ್ಯಂತ ವಿವಿಧ ರಂಗಗಳ 108 ಕಲಾವಿದರಿಗೆ ಪುರಸ್ಕಾರ

ನವದೆಹಲಿ: ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯು 2024 ಮತ್ತು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಎಲ್ಲ ವಿಭಾಗಗಳಿಂದ ರಾಜ್ಯದ 10 ಸಾಧಕರು ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ. 

ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಸಂಗೀತ, ನೃತ್ಯ, ನಾಟಕ, ಯಕ್ಷಗಾನ, ಜಾನಪದ ಕಲೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿದೆ. ವಿಶೇಷವಾಗಿ ಅಕಾಡೆಮಿಯ ಅತ್ಯುನ್ನತ ಫೆಲೋಶಿಪ್ (ಅಕಾಡೆಮಿ ರತ್ನ) ಗೌರವಕ್ಕೆ 7 ಜನ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಎಲ್ಲ ವಿಭಾಗಗಳಿಂದ ಒಟ್ಟು 108 ಸಾಧಕರನ್ನು ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪಡೆದ ರಾಜ್ಯದ ಸಾಧಕರು

1. ಆನೂರು ಅನಂತಕೃಷ್ಣ ಶರ್ಮ: ಶಿವು ಎಂಬ ಹೆಸರಿನಿಂದ ಸಂಗೀತಲೋಕದಲ್ಲಿ ಜನಪ್ರಿಯರಾಗಿರುವ ಆನೂರು ಅನಂತಕೃಷ್ಣ ಶರ್ಮ ಮೃದಂಗ ವಾದಕರು. ಅನೇಕ ಪ್ರಶಸ್ತಿ ಗೌರವಗಳಿಗೆ ಭಾಜನರಾಗಿರುವ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೂಲತಃ ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಇವರ ತಂದೆ ಆನೂರ ರಾಮಕೃಷ್ಣ ಅವರು ಖ್ಯಾತ ಪಿಟೀಲು ವಾದಕರಾಗಿದ್ದರು.

2. ಕೆರೆಮನೆ ಶಿವಾನಂದ ಹೆಗಡೆ: ಉತ್ತರ ಕನ್ನಡ ಜಿಲ್ಲೆಯ ಕೆರೆಮನೆ ಮನೆತನ ಯಕ್ಷಗಾನದಿಂದ ಪ್ರಸಿದ್ಧವಾಗಿದ್ದಾರೆ. ಈ ಪರಂಪರೆಯ ಕಲಾವಿದರೆಲ್ಲ ಅನುಕರಣೆ ಬಿಟ್ಟು ಸ್ವಂತಿಕೆಯಿಂದಲೇ ಗುರುತಿಸಿಕೊಂಡಿರುವುದು ವಿಶೇಷ. ಯಕ್ಷಗಾನ ಕಲಾವಿದರಾಗಿ ಮಾತ್ರವಲ್ಲದೇ ಯಕ್ಷಗಾನದ ಸಾಧ್ಯತೆಗಳನ್ನು ಮೂಲಕ್ಕೆ ಚ್ಯುತಿ ಬಾರದ ಹಾಗೆ ವಿಸ್ತರಿಸುತ್ತ ಬಂದಿರುವ ಶಿವಾನಂದ ಹೆಗಡೆ ಮೂಲಕ ಈ ಮನೆತನಕ್ಕೆ ನಾಲ್ಕನೇ ಬಾರಿಗೆ ರಾಷ್ಟ್ರಮಟ್ಟದ ಗೌರವ ಸಂದಂತಾಗಿದೆ.

3. ಟಿ.ಎಸ್. ನಾಗಾಭರಣ: ಮೈಸೂರು ಜಿಲ್ಲೆ ತಲಕಾಡಿನವರಾದ ಟಿ.ಎಸ್. ನಾಗಾಭರಣ ನಾಡಿನ ಪ್ರಸಿದ್ಧ ನಿರ್ದೇಶಕರಾಗಿ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಚಲನಚಿತ್ರಗಳಲ್ಲಿ ಜಾನಪದೀಯ ಸೊಗಡಿನೊಂದಿಗೆ ಚಿತ್ರಕತೆಗಳನ್ನು ನಿರ್ವಿುಸಿದ ಹೆಗ್ಗಳಿಕೆ ಇವರದ್ದು. ರಂಗಭೂಮಿ ನಿರ್ದೇಶನಕ್ಕಾಗಿ ನಾಗಾಭರಣ ಅವರಿಗೆ ಪ್ರಶಸ್ತಿ ಬಂದಿದೆ.

4. ವಿದುಷಿ ಟಿ.ಎಸ್. ಸತ್ಯವತಿ: ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆಯಾಗಿ ಅಷ್ಟೇ ಅಲ್ಲದೆ ಸಂಗೀತ ಶಾಸ್ತ್ರಜ್ಞೆಯಾಗಿಯೂ ಪ್ರಸಿದ್ಧರಾಗಿರುವ ಟಿ.ಎಸ್. ಸತ್ಯವತಿ ಸಂಗೀತದ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ವಿದ್ವಾಂಸರಲ್ಲಿ ಒಬ್ಬರು. ಸಂಸ್ಕೃತವಿದ್ವಾಂಸರೂ ಆಗಿರುವ ಅವರು ಗಾನಕಲಾಶ್ರೀ ಎಂದೇ ಖ್ಯಾತರಾದವರು.

5. ಜ್ಯೋತಿ ಹೆಗಡೆ: ಸಂಗೀತ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮಾಡಿರುವ ಇವರು ಬಹು ಅಪರೂಪದ ವಾದ್ಯವಾದ ರುದ್ರವೀಣೆಯ ವಾದಕಿಯಾಗಿ ಪ್ರಸಿದ್ಧರಾಗಿದ್ದಾರೆ. ಧಾರವಾಡದ ಕರ್ನಾಟಕ ವಿವಿಯಲ್ಲಿ ಸಂಗೀತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಜ್ಯೋತಿಯವರು ರುದ್ರವೀಣೆಯ ಜೊತೆಗೆ ಸೀತಾರ್ ವಾದನದಲ್ಲೂ ಸಿದ್ಧಹಸ್ತರು. ಸಂಗೀತ ಕ್ಷೇತ್ರದ ಇವರ ಸಾಧನೆಗಾಗಿ ಕೇಂದ್ರ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

6. ವೀಣಾಮೂರ್ತಿ ವಿಜಯ್: ಭರತನಾಟ್ಯ ಮತ್ತು ಕುಚುಪುಡಿ ನೃತ್ಯಪಟುವಾಗಿರುವ ಇವರು ನೃತ್ಯ ಕ್ಷೇತ್ರದಲ್ಲಿ ಆಳವಾದ ಅಭ್ಯಾಸ ಮಾಡಿದ್ದಾರೆ. ರಾಜರಾಜೇಶ್ವರಿ ಕಲಾನಿಕೇತನ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಆ ಮೂಲಕ ನೂರಾರು ಜನರಿಗೆ ಶಾಸ್ತ್ರೀಯವಾಗಿ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ. ಇವರ ನೃತ್ಯ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

7. ಶಿವಶ್ರೀ ತೇಜಸ್ವಿ ಸೂರ್ಯ: ‘ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ಕ್ಕೆ ಭಾಜನರಾಗಿರುವ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯ ಕರ್ನಾಟಕ ಸಂಗೀತ ಕೃತಿಗಳು, ಭಜನೆ, ಅಭಂಗಗಳ ಗಾಯನದ ಮೂಲಕ ಭಾರತ ಮತ್ತು ಪ್ರಪಂಚದಾದ್ಯಂತ ಅನೇಕ ಗೋಷ್ಠಿಗಳಲ್ಲಿ ಪಾಲ್ಗೊಂಡು ಪ್ರಸಿದ್ಧರಾಗಿದ್ದಾರೆ.

8. ಎಸ್.ಸಿ. ಶರ್ವ: ಇವರು ವಿಶ್ವವಿದ್ಯಾಲಯದ ಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದು, ಇವರ ಸಾಧನೆಗೆ ಹಲವು ಪ್ರಶಸ್ತಿಗಳು ಬಂದಿವೆ. ಜನಪದ ಕ್ಷೇತ್ರದಲ್ಲಿ ಮಾಡಿರುವ ಅಧ್ಯಯನವನ್ನು ಪರಿಗಣಿಸಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಈ ಬಾರಿ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

9. ಮಹಾಲಕ್ಷ್ಮೀ ಶೆಣೈ: ‘ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ಕ್ಕೆ ಭಾಜನರಾಗಿರುವ ಉಡುಪಿ ಜಿಲ್ಲೆ ಕಾರ್ಕಳದ ಸಂಗೀತ ವಿದುಷಿ ಮಹಾಲಕ್ಷ್ಮೀ ಶೆಣೈ ಹಿಂದುಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಜತೆಗೆ ಭರತನಾಟ್ಯವನ್ನೂ ಕರಗತ ಮಾಡಿಕೊಂಡವರು. ದುಬೈ, ಜರ್ಮನಿ, ಅಮೆರಿಕ ಸೇರಿ ದೇಶಾದ್ಯಂತ 650ಕ್ಕೂ ಹೆಚ್ಚು ಕಛೇರಿ ನೀಡಿದ್ದಾರೆ.

10. ಮುಕ್ಕಾಟಿರ ಶಿಲ್ಪಾ ನಂಜಪ್ಪ: ‘ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ಕ್ಕೆ ಭಾಜನರಾಗಿರುವಕೊಡಗು ಜಿಲ್ಲೆಯ ಸೋಮವಾರಪೇಟೆ ಕಾಂಡನಕೊಲ್ಲಿ ಗ್ರಾಮದ ಮುಕ್ಕಾಟಿರ ಶಿಲ್ಪಾ ನಂಜಪ್ಪ ಭರತನಾಟ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ದೇಶ-ವಿದೇಶಗಳಲ್ಲಿ 300ಕ್ಕೂ ಅಧಿಕ ಏಕ ವ್ಯಕ್ತಿ ಪ್ರದರ್ಶನ ನೀಡಿದ ಹೆಗ್ಗಳಿಗೆ ಪಾತ್ರರಾಗಿದ್ದಾರೆ.