High court 
ರಾಜ್ಯ

ಕಾರಣ ಉಲ್ಲೇಖಿಸದೆ ಲೀವ್​ ಇಂಡಿಯಾ ನೋಟಿಸ್​| ಕೇಂದ್ರಕ್ಕಿದೆ ಅಧಿಕಾರ| High court

ಬೆಂಗಳೂರು: ಯಾವುದೇ ನಿರ್ದಿಷ್ಟ ಕಾರಣಗಳನ್ನು ಉಲ್ಲೇಖಿಸದೆಯೇ ವಿದೇಶಿಗರಿಗೆ ಲೀವ್​ ಇಂಡಿಯಾ ನೋಟಿಸ್​ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಆದ್ದರಿಂದ, ನೋಟಿಸ್​ನಲ್ಲಿ ಕಾರಣ ನೀಡಿಲ್ಲ ಎಂಬ ಕಾರಣಕ್ಕೆ ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲಾಗದು ಎಂದು ಹೈಕೋರ್ಟ್​ ಹೇಳಿದೆ.
ದೇಶ ತೊರೆಯುವಂತೆ ನೀಡಿದ್ದ ನೋಟಿಸ್​ ಪ್ರಶ್ನಿಸಿ ಆಫ್ರಿಕಾದ ಕ್ಯಾಮರೂನ್​ ದೇಶದ ಪ್ರಜೆ ಗೂಮ್ಸಿ ಸ್ಟೀವ್​ ಬೆರೋಲ್​ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸ್ಪಷ್ಟನೆ ನೀಡಿದೆ.
ಅರ್ಜಿದಾರರ ಪರ ವಾದಿಸಿದ್ದ ವಕೀಲರು, ಅರ್ಜಿದಾರರು ವಿದ್ಯಾರ್ಥಿಯಾಗಿದ್ದು, ನಗರದ ಖಾಸಗಿ ಕಾಲೇಜೊಂದರಲ್ಲಿ ಬಿ.ಟೆಕ್​ ಶಿಕ್ಷಣ ಪಡೆಯುತ್ತಿದ್ದಾರೆ. ಅವರ ವೀಸಾ ವಿಸ್ತರಣೆಯನ್ನು 2027ರ ತನಕ ಮುಂದುವರಿಸಲಾಗಿದೆ. ಆದರೂ, ಸೂಕ್ತ ಕಾರಣ ನೀಡದೆ ಲೀವ್​ ಇಂಡಿಯಾ ನೋಟಿಸ್​ ಅನ್ನು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎ್​ಆರ್​ಆರ್​ಒ) ನೀಡಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎ್​ಆರ್​ಆರ್​ಒ ಪರ ವಕೀಲರು, ಅರ್ಜಿದಾರರು ವಿದ್ಯಾರ್ಥಿ ವೀಸಾದ ಮೂಲಕ ಬಂದಿದ್ದಾರೆ. ನಿಯಮಗಳ ಮೂಲಕ ವಿದ್ಯಾರ್ಥಿ ವೀಸಾದಲ್ಲಿ ಬಂದಿರುವ ವಿದೇಶಿಯರು ಆರ್ಥಿಕ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿಲ್ಲ. ಅರ್ಜಿದಾರರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಪೊಲೀಸ್​ ತಪಾಸಣೆ ವೇಳೆ ಪತ್ತೆಯಾಗಿದೆ. ಆದ್ದರಿಂದ, ವೀಸಾವನ್ನು ವಿಸ್ತರಿಸಲಾಗಿದ್ದರೂ ಕೂಡ, ನಿಯಮ ಉಲ್ಲಂಘಿಸಿದರೆ ಯಾವುದೇ ಕಾರಣ ನೀಡದೆ ಅದನ್ನು ರದ್ದುಪಡಿಸಿ, ಲೀವ್​ ಇಂಡಿಯಾ ನೋಟಿಸ್​ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂದು ವಾದಿಸಿದರು. ಈ ವಾದ ಪರಿಗಣಿಸಿದ ಹೈಕೋರ್ಟ್​ ಅರ್ಜಿ ವಜಾಗೊಳಿಸಿ ಆದೇಶಿತು.